(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 21
ನಗರದಲ್ಲಿ ಖಾಸಗಿ ಕಾಲೇಜೊಂದರ ನೂತನ ಕಟ್ಟಡ ನಿರ್ಮಾಣಕ್ಕೆ, ಸರ್ಕಾರಿ ಮಹಾವಿದ್ಯಾಲಯವೊಂದರ ಪ್ರಾಚಾರ್ಯರೊಬ್ಬರು ಸೇರಿದಂತೆ ಕೆಲ ಸರ್ಕಾರಿ ಉಪನ್ಯಾಸಕರ ಬಳಗ ಭಾಗಿಯಾಗಿ ಅಭೂತಪೂರ್ವ ‘ಶಿಕ್ಷಣ ಪ್ರೇಮ’ ಮೆರೆದಿರುವುದು ಉಪನ್ಯಾಸಕರ ಬಳಗದಲ್ಲಿ ಚರ್ಚೆಗೆ ಆಹಾರವಾಗಿದೆ. ಕೆಲ ಸರ್ಕಾರಿ ಉಪನ್ಯಾಸಕರು ತಾವು ಕಲಿಸುತ್ತಿರುವ ಶಿಕ್ಷಣ ಸಂಸ್ಥೆಯ ಜೊತೆ ಜೊತೆಗೆ, ಖಾಸಗಿಯವರ ಶಿಕ್ಷಣ ಸಂಸ್ಥೆಗೆ ಅಡಿಗಲ್ಲು ಹಾಕುವುದರಿಂದ ಹಿಡಿದು ವಗೈರಾ.. ವಗೈರಾ… ಕೆಲಸ ಕಾರ್ಯಗಳಿಗೆ ಭರಪೂರ ಸಹಾಯ-ಸಹಕಾರ ನೀಡುತ್ತಿರುವುದಕ್ಕೆ ‘ಬಹುಪರಾಕ್’ ಹೇಳಲೇಬೇಕೆಂದು ಸಾರ್ವಜನಿಕರು ಗುನು ಗುನು ಮಾತನಾಡುತ್ತಿದ್ದಾರೆ.
ಆ ಸರ್ಕಾರಿ ಕಾಲೇಜೊಂದರ ಉಪನ್ಯಾಸಕರೊಬ್ಬರು, ತಾವು ಕಲಿಸುತ್ತಿರುವ ಕಾಲೇಜಿನಲ್ಲಿ ಹೆಚ್ಚುಕಡಿಮೆಯಾದರೂ ಚಿಂತೆಯಿಲ್ಲ ಖಾಸಗಿಯವರ ಒಂದು ವಿಜ್ಞಾನ ಮತ್ತು ಇನ್ನೊಂದು ಕಲಾ & ವಾಣಿಜ್ಯ ಕಾಲೇಜಿನ ಬಗ್ಗೆ ‘ವಿಶೇಷ ಕಾಳಜಿ’ ಹೊಂದಿರುವ ಅವರು ಆಗಾಗ ತಮ್ಮ ‘ಅನುಪಮ ಸೇವೆ’ಯನ್ನು ಸಲ್ಲಿಸುವ ಜೊತೆಗೆ, ಸರ್ಕಾರಿ ನೌಕರಿಯಲ್ಲಿರುವ ಕೆಲ ಉಪನ್ಯಾಸಕ ಗೆಳೆಯರ ‘ಉದಾರ ಸೇವೆ’ಯನ್ನು ಆ ಕಾಲೇಜುಗಳ ಉತ್ತಮೋತ್ತಮ ಬೆಳವಣಿಗೆಗೆ ಶಕ್ತಿಮೀರಿ ಬಳಸಿಕೊಳ್ಳುವ ಮೂಲಕ ಶಿಕ್ಷಣ ಪ್ರೇಮವನ್ನು ಮೆರೆಯುತ್ತಿರುವುದು ಸಾರ್ವಜನಿಕ ಹಾಗೂ ಕೆಲ ಉಪನ್ಯಾಸಕರ ಬಳಗದಲ್ಲಿ ಬಲು ಹಿಂದಿನಿಂದಲೂ ಬಹು ಚರ್ಚಿತ ವಿಷಯವೇ ಆಗಿದೆ.
ಕೆಲ ತಿಂಗಳುಗಳ ಹಿಂದೆ ನಗರದ ಸಮಾನ ಮನಸ್ಕರ ವೇದಿಕೆಯೊಂದು, ಕೆಲ ಕಾಲೇಜಿನ ಸರ್ಕಾರಿ ಉಪನ್ಯಾಸಕರು, ಸರ್ಕಾರಿ ಕಾಲೇಜುಗಳ ಕಾರ್ಯಕ್ರಮಗಳಿಗಿಂತ ಅತಿ ಹೆಚ್ಚು ಖಾಸಗಿ ಕಾಲೇಜುಗಳಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಲ್ಲದೇ, ಸರ್ಕಾರಿ ಕಾಲೇಜುಗಳಲ್ಲಿ ನಡೆಸಬೇಕಾದ ಕಾರ್ಯಕ್ರಮ, ಕ್ರೀಡಾಕೂಟ ಹಾಗೂ ತರಬೇತಿಗಳನ್ನು ಖಾಸಗಿಯವರ ಕಾಲೇಜುಗಳಲ್ಲಿ ನಡೆಸುತ್ತಿರುವುದು, ಪದೇ ಪದೆ ಕರ್ತವ್ಯಕ್ಕೆ ಗೈರಾಗುವುದು, ಸೇರಿದಂತೆ ಹೀಗೆ ಹಲವು ದೋಷಗಳನ್ನು ಪಟ್ಟಿಮಾಡಿ ತಹಸೀಲ್ದಾರರ ಮೂಲಕ ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ರವಾನಿಸಿತ್ತು. ಈ ನಡುವೆಯೂ ಬಹಳಷ್ಟು ಕಾರ್ಯಕ್ರಮಗಳು ಸೇರಿದಂತೆ ತರಬೇತಿಗಳು ಖಾಸಗಿ ಕಾಲೇಜುಗಳಲ್ಲಿ ನಡೆದಿದ್ದು, ಸರ್ಕಾರಿ ಮಕ್ಕಳಿಗೆ ಅದರ ಸೌಲಭ್ಯ ಒದಗಿಸಿಕೊಡುವಲ್ಲಿ ಆಯಾ ಕಾಲೇಜುಗಳವರು ಬೇಜವಾಬ್ದಾರಿ ವಹಿಸಿದ್ದಾರೆನ್ನುವ ಬಗ್ಗೆ ವಿದ್ಯಾರ್ಥಿ ಪಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿದೆ.
ಈ ನಡುವೆ ಸರ್ಕಾರಿ ಕಾಲೇಜುಗಳ ಪ್ರಾಚಾರ್ಯರೇ, ಉಪನ್ಯಾಸಕರೇ ಖಾಸಗಿ ಕಾಲೇಜು ಕಟ್ಟಡ ನಿರ್ಮಾಣದ ಚಾಲನೆಯಲ್ಲಿ ಮುಂಚೂಣಿಯಲ್ಲಿ ನಿಂತು ಭಾಗಿಯಾದರೆ ಸಾರ್ವಜನಿಕರಿಗೆ ಯಾವ ಸಂದೇಶ ಹೋಗಲಿದೆ ?, ಇದು ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಪ್ರಚೋದಿಸಿದಂತಾಗುವುದಿಲ್ಲವೇ ? ಇದರಿಂದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಸರ್ಕಾರಿ ಕಾಲೇಜುಗಳ ಬಗ್ಗೆ ಯಾವ ಮನಸ್ಥಿತಿ ಮೂಡಲಿದೆ ?, ಆತ್ಮೀಯತೆ, ಗೆಳೆತನ ಯಾವ್ಯಾವುದೋ ಕಾರಣಕ್ಕೆ ತಾವು ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಸಂಸ್ಥೆಯನ್ನು ನಿರ್ಲಕ್ಷಿಸಿ, ಖಾಸಗಿ ಕಾಲೇಜುಗಳ ಕಾರ್ಯಕ್ರಮ, ತರಬೇತಿ, ಕ್ರೀಡಾಕೂಟ ಹಾಗೂ ಶಿಬಿರಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದರಿಂದ ಸರ್ಕಾರಿ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅವರ ಏಳ್ಗೆಯ ಗತಿಯೇನು ?, ಸರ್ಕಾರಿ ಸಂಸ್ಥೆಯಲ್ಲಿದ್ದುಕೊAಡು ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯವರ ಬಗ್ಗೆ ‘ಉದಾರ ಕಾಳಜಿ’ ಮೆರೆಯುತ್ತಿರುವುದರ ‘ಒಳಗುಟ್ಟೇನು’ ? ಶಿಕ್ಷಣ ಇಲಾಖೆಯ ನಿಯಮಾವಳಿಗಳಲ್ಲಿ ಖಾಸಗಿಯವರಿಗೆ ಸಹಕರಿಸುವ ರಿಯಾಯಿತಿ ಏನಾದರೂ ಇದೆಯೇ ? ಎಂದು ವಿದ್ಯಾರ್ಥಿ ಪಾಲಕರು, ಸಾರ್ವಜನಿಕರು ಪ್ರಶ್ನಿಸಿದ್ದಾರೆ.