ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 26
ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚೆಯಾದಂತೆ 2025-26ನೇ ಸಾಲಿನಲ್ಲಿ ತುಂಗಭದ್ರಾ ಡ್ಯಾಮಿನ ಕ್ರಸ್ಟ್ ಗೇಟ್‌ಗಳನ್ನು ಬದಲಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದು, ಹಾಗಾಗಿ ಜೂನ್ 27ರಂದು ಬೆಂಗಳೂರಿನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ತುಂಗಭದ್ರಾ ನಾಲೆಗಳಿಗೆ ಎಲ್ಲಿಂದ ಎಲ್ಲಿಯವರೆಗೆ ನೀರು ಹರಿಸಬೇಕೆನ್ನುವ ಕುರಿತು ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ 19ನೇ ಕ್ರಸ್ಟಗೇಟ್ ಕೊಚ್ಚಿಹೋದ ಹಿನ್ನೆಲೆಯಲ್ಲಿ, 33 ಗೇಟ್‌ಗಳನ್ನು ಬದಲಿಸಬೇಕೆಂಬ ಕುರಿತು ಪರಸ್ಪರ ಚರ್ಚಿಸಿ 3 ರಾಜ್ಯಗಳು ಒಮ್ಮತಕ್ಕೆ ಬಂದಿವೆ. ಈ ಕಾರ್ಯಕ್ಕೆ ಆಯಾ ರಾಜ್ಯಗಳ ಸರ್ಕಾರದ ಕಾರ್ಯದರ್ಶಿಗಳು, ನೀರಾವರಿ ಕಾರ್ಯದರ್ಶಿಗಳು, ಬೋರ್ಡ್ ನಿಯಮಗಳ ಅನ್ವಯ ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಕಂಪನಿಯೊಂದು ಗುತ್ತಿಗೆ ಪಡೆದಿದ್ದು, ಆ ಕಂಪನಿಯವರು 15 ತಿಂಗಳ ಕಾಲಾವಕಾಶ ಕೇಳಿದ್ದಾರೆ. ರೈತರ ಹಿತದೃಷ್ಟಿಯಿಂದ ಸರ್ಕಾರ ತಜ್ಞರ ಸಲಹೆ, ಆಧುನಿಕ ತಂತ್ರಜ್ಞಾನ ಬಳಸಿ ಗೇಟ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಕೂಡ. ಹಾಗಾಗಿ ರೈತರು ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಒಳಗಾಗಬಾರದು. ಏನೆಲ್ಲಾ ಹೊಸ ತಂತ್ರಜ್ಞಾನ ಬಂದಿದ್ದರೂ, ಅತಿ ಭಾರದ 33 ಕ್ರಸ್ಟ್‌ಗೇಟ್‌ಗಳನ್ನು ಡ್ಯಾಮಿಗೆ ಅಳವಡಿಸುವುದು ಸುಲಭದ ಮಾತಲ್ಲ. 1 ಕ್ಕ್ರಸ್ಟ್‌ಗೇಟ್ ಅಳವಡಿಕೆಗೆ 7 ದಿನ ಬೇಕೆಂದು ಕಂಪನಿಯವರು ತಿಳಿಸಿದ್ದಾರೆ. ಹಾಗಾದರೆ 33 ಕ್ರಸ್ಟ್‌ಗೇಟ್ ಅಳವಡಿಸಲು 231 ದಿನಗಳೇ ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ ಬೆಳೆಗೆ ನೀರು ಹರಿಸುವ ಕುರಿತಂತೆ ಹೇಗೆಲ್ಲಾ ಯೋಜಿಸಬಹುದು ಸೇರಿದಂತೆ ಇನ್ನೂ ಮಹತ್ವದ ವಿಚಾರಗಳ ಕುರಿತು ಐಸಿಸಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸುವುದಾಗಿ ವಿವರಿಸಿದರು.
“ತುಂಗಭದ್ರಾ ಅಣೆಕಟ್ಟಿನ ಬಗ್ಗೆ ಯಾರಿಗೆ ಕಾಳಜಿ ಇದೆ ? ” : ಹನುಮನಗೌಡ ಬೆಳಗುರ್ಕಿ ಅಸಮಾಧಾನ
ರೈತರ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಹಿರಿಯ ಮುಖಂಡ ಹಾಗೂ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ, ಹನುಮನಗೌಡ ಬೆಳಗುರ್ಕಿ ಅವರು, “ಭದ್ರಾ, ತುಂಗಾ ಮೇಲ್ಡಂಡೆ, ತುಂಗಾಕ್ಕೆ ಅಲ್ಲಿ ಯಡಿಯೂರಪ್ಪ ಇದ್ದಾರೆ, ಕಬಿನಿ, ಹೇಮಾವತಿ, ಕಾವೇರಿಗೆ ದೇವೇಗೌಡ್ರು ಇದ್ದಾರೆ. ಈ ತುಂಗಭದ್ರಾಕ್ಕೆ ಯಾರಿದ್ದಾರೆ ? ಒಂದು ರೀತಿಯಲ್ಲಿ ಹೇಳಬೇಕಾದರೆ, ತುಂಗಭದ್ರಕ್ಕೆ ಯಾರೂ ಇಲ್ಲ ! ಹಾಗಾಗಿ ಇಂತಹ ಪರಿಸ್ಥಿತಿ ಇದೆ. ಬೋರ್ಡ್ ರಚನೆಯಾದ ನಂತರ ತುಂಗಭದ್ರಾಕ್ಕೆ ಇನ್ನೂ ದಿಕ್ಕು-ದೆಸೆಯಿಲ್ಲದಂತಾಗಿದೆ. ಹಾಗಾಗಿ ಡ್ಯಾಮು ಪಾರದರ್ಶಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
“33 ಕ್ರಸ್ಟ್ ಗೇಟ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸಿಡಬ್ಲುö್ಯಸಿ, ಡಿಎಸ್‌ಆರ್‌ಪಿ (ಡ್ಯಾಮ್ ಸೇಫ್ಟಿ ರಿವ್ಯೂವ್ ಪ್ಯಾನಲ್) ರಿಪೋರ್ಟ್ ಈ ಎಲ್ಲ ಅಂಶಗಳು ಸೇರಿದಂತೆ ಸರ್ಕಾರ ತೀರ್ಮಾನಕ್ಕೆ ಬರುವುದರೊಳಗೆ 1 ವರ್ಷ ಗತಿಸಿ ಹೋಗಿದೆ. ಹೀಗಾದರೆ ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿ ಹೇಗೆ ? 2008ರಲ್ಲಿ 100 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಮು, 2016ರಲ್ಲಿ 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದುತ್ತದೆ. ಇದು ಅಚ್ಚರಿಯ ವಿಷಯವಾಗಿದೆ. ತುಂಗಭದ್ರಾ ಡ್ಯಾಮಿನ ಕುರಿತಂತೆ ಆರ್.ವಿ.ಅಸೋಷಿಯೇಟ್ಸ್ನ ಸೆಜಮೆಂಟ್ ರಿಪೋರ್ಟ್ನ್ನೇ ಇಂದಿಗೂ ಅಂತಿಮ ಎಂದು ಪರಿಗಣಿಸಲಾಗುತ್ತಿದೆ. ಆ ರಿಪೋರ್ಟ್‌ನಲ್ಲಿ ಏನಿದೆ ? ಯಾಕೆ ಹೀಗೆ ? ಎಂಬುದರ ಬಗ್ಗೆ ಇಲ್ಲಿಯವರೆಗೂ ಪರಾಮರ್ಶೆಯೇ ನಡೆದಿಲ್ಲ” ಎಂದು ಹನುಮನಗೌಡ ಬೆಳಗುರ್ಕಿ ವಿಶ್ಲೇಷಿಸಿದರು.
“ಯಾವುದೇ ಡ್ಯಾಮಿನ ಆಯುಸ್ಸು 100 ವರ್ಷ. ತುಂಗಭದ್ರಾ ಡ್ಯಾಮು ನಿರ್ಮಿಸಿ 75 ವರ್ಷಗಳಾದರೂ ಇಲ್ಲಿಯವರೆಗೂ ಡ್ಯಾಮಿನ ಸಮಗ್ರ ಸ್ಥಿತಿಯ ಬಗ್ಗೆ ಅಧ್ಯಯನವಾಗಿಲ್ಲ. ಇದು ನಿರ್ಲಕ್ಷö್ಯವನ್ನು ಎತ್ತಿ ತೋರಿಸುತ್ತದೆ. ಇಲ್ಲಿಯವರೆಗೂ ಸಿಡಬ್ಲುö್ಯಸಿ ಮೀಟಿಂಗ್ ಆಗಿಲ್ಲ. ನಮ್ಮ ರಾಜ್ಯದವರೇ ಆಗಿರುವ ವಿ.ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಮಂತ್ರಾಲಯದ ರಾಜ್ಯ ಸಚಿವರಾಗಿದ್ದು ಅವರ ಗಮನ ಸೆಳೆದು ಸಿಡಬ್ಲುö್ಯಸಿ ಸಭೆ ಕರೆದು ಡ್ಯಾಮಿನ ಕುರಿತಂತೆ ಸಮಗ್ರ ಚರ್ಚೆಯಾಗಲಿ ಎಂದ ಅವರು ತುಂಗಭದ್ರಾ ಡ್ಯಾಮಿನ ಕುರಿತಂತೆ ರೈತರು ಜಾಗೃತಿಗೊಂಡು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಅಲ್ಲದೇ ಈಗಿನಿಂದಲೇ ಕಾಲುವೆಗೆ ನೀರು ಹರಿಬಿಟ್ಟು ನವೆಂಬರ್‌ವರೆಗೆ ಬೆಳೆ ಬೆಳೆಯಲು ರೈತರಿಗೆ ಅನುಕೂಲ ಕಲ್ಪಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರಸ್ಟ್‌ಗೇಟ್ ಅಳವಡಿಸಲು ರಾಜ್ಯ ಸರ್ಕಾರ ಇಚ್ಛಾಸಕ್ತಿ ಹೊಂದಿದೆ : ರಾಜಶೇಖರ್ ಹಿಟ್ನಾಳ್
ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ತುಂಗಭದ್ರಾ ಡ್ಯಾಮು ಮೂರು ಜಿಲ್ಲೆಗಳ ಜೀವನಾಡಿಯಾಗಿದೆ. 133 ಟಿಎಂಸಿ ಸಂಗ್ರಹ ಸಾಮರ್ಥ್ಯ ಡ್ಯಾಮು 28 ಟಿಎಂಸಿ ಹೂಳು ತುಂಬಿದ್ದರಿಂದ 105 ಟಿಎಂಸಿ ಸಾಮರ್ಥ್ಯಕ್ಕೆ ಬಂದಿದೆ. ಪ್ರತಿ ಬಾರಿಯೂ ರೈತರಿಗೆ ನೀರಿನ ಕೊರತೆ ಕಾಡುತ್ತಿದೆ. ಹಾಗಾಗಿ ಎಲ್ಲ ಕ್ರಸ್ಟ್ಗೇಟ್‌ಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಚ್ಛಾಸಕ್ತಿ ಹೊಂದಿದೆ. ಇದಕ್ಕೆ ತನ್ನ ಪಾಲಿನ ಹಣಕಾಸನ್ನೂ ಸಹ ಬಿಡುಗಡೆಗೊಳಿಸಿದೆ. ಕ್ರಸ್ಟ್‌ಗೇಟ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ 1 ಬೆಳೆಗೆ ನೀರು ಹರಿಸುವ ಕುರಿತಂತೆ ಐಸಿಸಿ ಮೀಟಿಂಗ್‌ನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮುಖಂಡ ಚಾಮರಸ ಮಾಲಿ ಪಾಟೀಲ್, ಶ್ಯಾಮ ಸುಂದರ ಕೀರ್ತಿ, ಅಶೋಕ ಭೂಪಾಲ, ಬಸವಂತರಾಯಗೌಡ ಕಲ್ಲೂರು, ದೇವೇಂದ್ರಗೌಡ ಮಾತನಾಡಿದರು. ರೈತ ಮುಖಂಡರು, ರೈತರು ಉಪಸ್ಥಿತರಿದ್ದರ.
ಸಭೆಯಲ್ಲಿ ರೈತರಿಂದ ಕೇಳಿಬಂದ ಒತ್ತಾಯಗಳು:-
1) ‘ಹೆಂಗಾನ ಮಾಡಿ ಎರಡು ಬೆಳಿಗೆ ನೀರು ಕೊಟ್ಟು ರೈತರ ನೆರವಿಗೆ ರ‍್ರಿ’
2) ‘ಜುಲೈ 1ರಿಂದ ಜನವರಿ ವರೆಗೆ ನೀರು ಹರಿಸಿ’
3) ‘ಒಂದು ಬೆಳೆಗಾದ್ರೂ ನೀರು ಹರಿಸಿ, ಇಲ್ಲದೇ ಹೋದ್ರೆ ರೈತರಿಗೆ, ಕೃಷಿಕೂಲಿಕಾರರಿಗೆ, ವ್ಯಾಪಾರಸ್ಥರಿಗೆ ಸಮಸ್ಯೆಯಾಗಲಿದೆ’
4) ‘ಸರ್ಕಾರಗಳು ಕಾಂಟ್ರಾಕ್ಟ್ದಾರರು ಹೇಳಿದಂತೆ ಕೇಳುವುದಲ್ಲ. 18 ಲಕ್ಷ ಎಕರೆ ಭೂಮಿಯಲ್ಲಿ ರೈತರು ಕೃಷಿ ಮಾಡುತ್ತಿದ್ದು, ಲಕ್ಷಾಂತರ ಕುಟುಂಬಗಳು ನೀರಾವರಿಯನ್ನು ಅವಲಂಬಿಸಿವೆ. ಇದರಲ್ಲೇ ಅವರ ಜೀವನೋಪಾಯ ಅಡಗಿರುವುದರಿಂದ, ಪ್ರತಿವರ್ಷ ಐದಾರು ಗೇಟುಗಳಂತೆ ಅಳವಡಿಸಿ ಎರಡೂ ಬೆಳೆಗೆ ನೀರು ಕೊಡಿ’
5) ‘ಗುತ್ತಿಗೆದಾರರು ಕ್ರಸ್ಟ್ಗೇಟ್ ಅಳವಡಿಸಲು 15 ತಿಂಗಳು ಅವಧಿ ಕೇಳಿರುವುದು ಅನುಮಾನ ಮೂಡಿಸುತ್ತದೆ. ಡ್ಯಾಮಿಗೆ ಒಳಹರಿವು ಹೆಚ್ಚುವ ಮುಂಚೆ 4 ತಿಂಗಳು ಸುಮ್ಮನೇ ಇದ್ದು ಈಗ ಕಾರ್ಯಪ್ರವೃತ್ತರಾಗಿರುವುದು ಸರಿಯಲ್ಲ. 4 ತಿಂಗಳು ಸುಮ್ಮನೇ ಕಳೆದುಹೋಗಿವೆ. ಒಂದೂವರೆ ನಿಮಿಷಕ್ಕೆ 1 ಕಾರು, 1 ದಿನಕ್ಕೆ 23 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡುವ ತಂತ್ರಜ್ಞಾನ ಕಾಲದಲ್ಲಿ ಇಷ್ಟು ಸಮಯ ಕೇಳಿದರೆ ಹೇಗೆ ? ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ದೇಶಗಳ ತಜ್ಞರ ಸಲಹೆ ಪಡೆದು ಆದಷ್ಟು ಬೇಗ ಕ್ರಸ್ಟ್ಗೇಟ್ ಅಳವಡಿಸಲಿ’
6) ‘2-3 ತಿಂಗಳಲ್ಲಿ ಕ್ರಸ್ಟ್ಗೇಟ್ ಅಳವಡಿಸಿ’’
7) ‘ತುಂಗಭದ್ರಾ ಡ್ಯಾಂ ಚೀಫ್ ಎಂಜಿನಿಯರ್ ಬದಲಾಗಲಿ’
8) ‘ತುಂಗಭದ್ರಾ ಅಣೆಕಟ್ಟೆಯ ನಿರ್ವಹಣೆ ಪಾರದರ್ಶಕಗೊಳ್ಳಲಿ’