ಸಿಂಧನೂರು: ಕುಡಿಯುವ ನೀರಿನ ಕೆರೆಯಲ್ಲಿ 5 ಮೀಟರ್ ನೀರು, ಭರದಿಂದ ಸಾಗಿದ ಒಡ್ಡು ರಿಪೇರಿ ಕೆಲಸ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 3

ನಗರದ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ 5 ಮೀಟರ್ ನೀರಿನ ಸಂಗ್ರಹ ಇದ್ದು, ಒಟ್ಟು 8 ಮೀಟರ್ ಸಾಮರ್ಥ್ಯದ ಕೆರೆಯಲ್ಲಿ ಉಳಿದ 3 ಮೀಟರ್ ನೀರು ಸಂಗ್ರಹಿಸಲು ಒಡ್ಡು ರಿಪೇರಿ ಕೆಲಸ ಭರದಿಂದ ಸಾಗಿರುವುದು ಮಂಗಳವಾರ ಬೆಳಿಗ್ಗೆ ಕಂಡುಬಂತು.
ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಜನವರಿ 10, 2026ರಂದು ಎಡದಂಡೆ ಮುಖ್ಯ ಕಾಲುವೆಗೆ ನೀರು ಸ್ಥಗಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುರ್ವಿಹಾಳ ಕೆರೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಅಲ್ಲಿಂದ ನೀರನ್ನು ಪೈಪ್‌ಲೈನ್ ಮೂಲಕ ತಾಲೂಕು ಕ್ರೀಡಾಂಗಣದ ಪಕ್ಕದಲ್ಲಿರುವ ಕೆರೆಗೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಕುಸಿದು ಒಡ್ಡು ರಿಪೇರಿ
ಪಶ್ಚಿಮ ದಿಕ್ಕಿನ ಬಲ ಭಾಗದ ಕೆರೆಯ ಒಡ್ಡು ಕಳೆದ ಹಲವು ವರ್ಷಗಳ ಹಿಂದೆ ಕುಸಿದಿತ್ತು. ಇದರಿಂದ ಕೆರೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಮಸ್ಯೆಯಾಗಿತ್ತು. ಈ ಕುರಿತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ನಗರಾಭಿವೃದ್ಧಿ ಹೋರಾಟ ಸಮಿತಿ ಒತ್ತಾಯದ ಹಿನ್ನೆಲೆಯಲ್ಲಿ ಈ ಬಾರಿ ಸಮತಟ್ಟಾಗಿ ಸೈಜುಗಲ್ಲು ಹೊಂದಿಸಿ, ಒಡ್ಡಿನ ಇಳಿಜಾರು ಬದಿಗೆ ಮರಂ ಹಾಕಿ, ಒಡ್ಡಿನ ಮೇಲ್ಭಾಗದಲ್ಲಿ ಮರಂ ಹಾಕಿ ರೂಲರ್ ಒಡೆಯುವ ಅಂತಿಮ ಕೆಲಸ ಸಾಗಿದ್ದು ಕಂಡುಬಂತು.
ಸದ್ಯ 8 ದಿವಸಕ್ಕೊಮ್ಮೆ ನೀರು ಪೂರೈಕೆ
ನಗರದಲ್ಲಿ 31 ವಾರ್ಡ್ಗಳಿದ್ದು, 8 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಕಾಲುವೆಯಲ್ಲಿ ನೀರಿದ್ದಾಗ ಆರೇಳು ದಿನಕ್ಕೆ ನೀರು ಪೂರೈಕೆಯಾಗುತ್ತಿತ್ತು. ಈಗ ಒಂದೆರಡು ದಿನ ಲೇಟಾಗಿ ನೀರು ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಇದೆ.
ತಿಂಗಳಿಗೆ 4 ಸಲ ನೀರಿನ ಪರೀಕ್ಷೆ ಕುಡಿಯುವ ನೀರಿನ ಕೆರೆಯಿಂದ ವಾರ್ಡ್ಗಳಿಗೆ ಪೂರೈಕೆಯಾಗುತ್ತಿರುವ ನೀರನ್ನು ತಿಂಗಳಿಗೆ 4 ಸಲ ಪರೀಕ್ಷೆ ನಡೆಸಲಾಗುತ್ತಿದೆ. ತಾಲೂಕು ಆರೋಗ್ಯ ಕೇಂದ್ರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

ನೀರಿನ ಮೇಲ್ವಿಚಾರಣೆ ನಿರ್ಲಕ್ಷ್ಯ
ಕಳೆದ ಜ.15ರಂದು ತಾಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಭೆ ನಡೆದಿದೆ. ತದನಂತರ ಸಾರ್ವಜನಿಕರ ಅಹವಾಲು ಹಾಗೂ ನೀರಿನ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಲು ನಗರಸಭೆಯ ಅಧಿಕಾರಿಗಳು ನೀರಿನ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ದಿನದಿಂದ ದಿನಕ್ಕೆ ಬೇಸಿಗೆ ಹೆಚ್ಚುತ್ತಿದ್ದು, ಈ ಬಾರಿ ತುಂಗಭದ್ರಾ ಡ್ಯಾಂನಿAದ ಒಂದೇ ಬೆಳೆಗೆ ನೀರು ನಿಗದಿಗೊಳಿಸಿರುವುದರಿಂದ, ಡ್ಯಾಂಗೆ ಕ್ರಸ್ಟ್ಗೇಟ್ ಅಳವಡಿಸಿ ಕಾಲುವೆಗೆ ನೀರು ಬರುವವರೆಗೂ ನೀರು ಸರಬರಾಜಿನ ನಿರ್ವಹಣೆಗೆ ಹೇಗೆಂಬ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಸಂಘಟನೆ ಮುಖಂಡರೊಬ್ಬರು ಕಳವಳ ವ್ಯಕ್ತಪಡಿಸುತ್ತಾರೆ.
ಮಾರ್ಚ್‌ನಲ್ಲಿ ಕಾಲುವೆಗೆ ನೀರು ಹರಿಸುವ ಸಾಧ್ಯತೆ ?
ಈಗಾಗಲೇ ರಾಯಚೂರು ಜಿಲ್ಲೆಯ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ವರದಿಗಳಿದ್ದು, ಈ ಹಿನ್ನೆಲೆಯಲ್ಲಿ ಮಾರ್ಚ್ನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗೆ ನೀರು ಹರಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಳೆದಬಾರಿಗಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಿರುವ ಬಗ್ಗೆ ಹವಾಮಾನ ಇಲಾಖೆಯ ಮುನ್ಸೂಚನೆ ಇರುವುದರಿಂದ, ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈಗಿನಿಂದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *