ನಮ್ಮ ಸಿಂಧನೂರು, ಜುಲೈ 9
ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ಅಳಡಿಸಲು ಖರೀದಿಸಿದ್ದ ೫ ಹೆಚ್‌ಪಿ ಮೋಟಾರ್ ಕಳುವಾಗಿದ್ದು, ಪತ್ತೆಹಚ್ಚಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟç ಸಮಿತಿ ಪಾರ್ಟಿಯಿಂದ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಲಾಗಿದೆ.
ಮಲ್ಲದಗುಡ್ಡ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜ ಮಾಡಲು ಕಳೆದ ವರ್ಷ ಗ್ರಾಮ ಪಂಚಾಯಿತಿ ವತಿಯಿಂದ 20 ಸಾವಿರ ರೂಪಾಯಿ ವ್ಯಯಿಸಿ ಕೊಳವೆಬಾವಿ ಮೋಟಾರ್ ಖರೀದಿಸಲಾಗಿತ್ತು. ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಮೋಟಾರ್ ಅನ್ನು ಆಗ ಅಳವಡಿಸಿರಲಿಲ್ಲ. ಹೀಗಾಗಿ ಅದೇ ಗ್ರಾಮದ ಪಂಚಾಯಿತಿ ಸದಸ್ಯರೊಬ್ಬರ ಮನೆಯಲ್ಲಿ ಹೊಸ ಮೋಟಾರ್ ಇಡಲಾಗಿತ್ತು. ಸದ್ಯ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ತಮ್ಮ ಮನೆಯಲ್ಲಿ ಇಟ್ಟಿದ್ದ ಪಂಚಾಯಿತಿಯ ಮೋಟಾರ್ ಕೊಡುವಂತೆ ಸದಸ್ಯನನ್ನು ಪಂಚಾಯಿತಿಯವರು ಕೇಳಿದರೆ, ಕಳ್ಳತನವಾಗಿದೆ ಎಂದು ಸದಸ್ಯ ಹೇಳುತ್ತಿದ್ದಾನೆೆ. ಹಾಗಾಗಿ ಕಳ್ಳತನವಾದ ಮೋಟಾರ್ ಶೀಘ್ರ ಹುಡುಕಿ, ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಕೆಆರ್‌ಎಸ್ ಪಾರ್ಟಿಯ ಮುಖಂಡ ನಿರುಪಾದಿ ಗೋಮರ್ಸಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಶರಣಪ್ಪ ಭೇರ್ಗಿ, ಬಸವರಾಜ ಮಲ್ಲದಗುಡ್ಡ ಸೇರಿದಂತೆ ಗ್ರಾಮಸ್ಥರು ಇದ್ದರು.