ವರದಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 26
2024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 100 ಸಂಖ್ಯಾಬಲದ 1 ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಸಿಂಧನೂರು ಟೌನ್ಗೆ 24-10-2024ರಂದು ಮಂಜೂರಾಗಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿ-2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 3ರಿಂದ 4 ಹಾಸ್ಟೆಲ್ಗಳು ಸಿಂಧನೂರು ತಾಲೂಕಿಗೆ ಮಂಜೂರಾಗಲಿದ್ದು, ಕನಿಷ್ಠ 400 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರೆಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಸಿಂಧನೂರು ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್ನಲ್ಲಿ ಪ್ರವೇಶ ಅವಕಾಶ ಬಯಸಿ ಇಲ್ಲಿಯವರೆಗೆ ಪ್ರಿ ಮೆಟ್ರಿಕ್ 2002 ಹಾಗೂ ಪೋಸ್ಟ್ ಮೆಟ್ರಿಕ್ 605 ಸೇರಿ ಒಟ್ಟು 2607 ಅರ್ಜಿಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದರು. ಅದರಲ್ಲಿ 593 ಪೋಸ್ಟ್ ಮೆಟ್ರಿಕ್, 210 ಪ್ರಿ ಮೆಟ್ರಿಕ್ ಒಟ್ಟು 803 ವಿದ್ಯಾರ್ಥಿಗಳು ಮಾತ್ರ ಬಿಸಿಎಂ ಹಾಸ್ಟೆಲ್ಗಳಲ್ಲಿ ವಸತಿ ಸೌಕರ್ಯದ ಅನುಕೂಲ ಪಡೆದಿದ್ದಾರೆ.
ಇತ್ತೀಚೆಗೆ ಬಿಸಿಎಂ ಹಾಸ್ಟೆಲ್ಗೆ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಿದೆ. ಈ ಬೇಡಿಕೆಯನ್ನು ಪರಿಗಣಿಸಿದರೆ ಇನ್ನೂ ಸಿಂಧನೂರು ತಾಲೂಕಿಗೆÀ 8 ಬಿಸಿಎಂ ಹಾಸ್ಟೆಲ್ಗಳು ಬೇಕೆಂದು ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವಾಇದೆ. ಇರುವ ಕಡಿಮೆ ಪ್ರಮಾಣದ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸೌಕರ್ಯ ಕಲ್ಪಿಸುವುದು ಹರಸಾಹಸದ ಕೆಲಸವಾಗಿದೆ. ಆದರೆ ಕೇವಲ 1 ಹಾಸ್ಟೆಲ್ ಮಂಜೂರಾಗಿದ್ದು, ಕೇವಲ 100 ವಿದ್ಯಾರ್ಥಿನಿಯರಿಗೆ ಅವಕಾಶ ದೊರೆಯಲಿದ್ದು, ಇನ್ನೂ ಬಹಳಷ್ಟು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.