ಕಾನೂನು, ಎಂಜಿನಿಯರಿಂಗ್ ಕಾಲೇಜ್, ಡಿಪ್ಲೊಮಾ, ಪ್ಯಾರಾ ಮೆಡಿಕಲ್ ಕತೆಗಳು ಏನಾದವು ?
ಬಜೆಟ್‌ನಲ್ಲಿ ಅನುದಾನ ಕೈತಪ್ಪಿದ್ದು ಯಾಕೆ ? ನಮ್ಮ ಸಿಂಧನೂರು, ಫೆಬ್ರವರಿ 17 ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಸಿಂಧನೂರು ತಾಲೂಕಿಗೆ ಸರ್ಕಾರ ಮಹತ್ವದ ಯೋಜನೆಗಳನ್ನು ಘೋಷಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಪ್ರತಿ ಬಾರಿಯೂ ಇಲ್ಲಿನ ಶಾಸಕರು ಒಂದು ಪಕ್ಷದವರಾದರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷವೇ ಬೇರೆಯಾಗಿರುತ್ತಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯವಾಗಿ ಕಾಂಗ್ರೆಸ್ ಶಾಸಕರೇ ಇದ್ದರೂ ಸಿಂಧನೂರಿಗರಿಗೆ ನಿರಾಸೆಯಾಗಿದೆ. ಕಳೆದ ಡಿಸೆಂಬರ್ 30, 2024ರಂದು ಸಿಂಧನೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಪದವಿ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, 40 ಸಾವಿರ ಎಕರೆ ಜಮೀನಿಗೆ ಅನುಕೂಲವಾಗುವ 109 ಕೋಟಿ ರೂಪಾಯಿ ವೆಚ್ಚದ ಸಿಂಧನೂರು ತಾಲೂಕಿನ ತಿಮ್ಮಾಪೂರ ಏತ ನೀರಾವರಿ ಯೋಜನೆ, ಜಲ ಜೀವನ್ ಮಿಷನ್ ಯೋಜನೆ ಸೇರಿದಂತೆ ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ನವಲಿ ಬಳಿ ಕೊಪ್ಪಳ ಜಿಲ್ಲೆ ಸೇರಿದಂತೆ ತಾಲೂಕಿನ ರೈತರಿಗೆ ಅನುಕೂಲವಾಗುವ ನವಲಿ ಸಮತೋಲನಾ ಜಲಾಶಯ ನಿರ್ಮಾಣ ಮಾಡುವ ಕುರಿತು ಘೋಷಣೆ ಮಾಡಿದ್ದರು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯ 15,600 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿ ಸಿದ್ಧವಾಗಿರುವುದನ್ನು ಪ್ರಸ್ತಾಪಿಸಲಾಗಿದೆ. ಶಾಸಕ ಹಂಪನಗೌಡ ಬಾದರ್ಲಿ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಸಿಂಧನೂರಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದ್ದಿದೆ. ಆದರೆ ಈ ಬಾರಿಯ ಮೊದಲ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಸಿಂಧನೂರಿಗೆ ಯಾವುದೇ ರೀತಿಯ ಯೋಜನೆಗಳನ್ನು ಘೋಷಿಸದೇ ಇರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿಂಧನೂರು ನೂತನ ಜಿಲ್ಲಾ ಕೇದ್ರ ರಚನೆ, ಕಾನೂನು, ಎಂಜಿನಿಯರಿಂಗ್, ಡಿಪ್ಲೊಮಾ, ಪ್ಯಾರಾ ಮೆಡಿಕಲ್ ಕಾಲೇಜು ಸೇರಿದಂತೆ ಹತ್ತು ಹಲವು ಭರವಸೆಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು, ಆದರೆ ಆ ರೀತಿಯ ಯಾವೊಂದು ಘೋಷಣೆಗಳು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಿಂಧನೂರಿಗೆ ಇಲ್ಲದೇ ಇರುವುದು ಮತ್ತೊಂದು ಬಜೆಟ್ ಕಾಯುವಂತೆ ಮಾಡಿದೆ. ಕಾಣದ ‘ಕೈಗಳ’ ಕರಾಮತ್ತೇ ?: ಸಿಂಧನೂರು ತಾಲೂಕಿಗೆ ಬಜೆಟ್‌ನಲ್ಲಿ ಯೋಜನೆಗಳು ದಕ್ಕದೇ ಇರುವುದಕ್ಕೆ ಕೆಲ ಕಾಣದ ಕೈಗಳು ವ್ಯವಸ್ಥಿತವಾಗಿ ಕೈಜೋಡಿಸಿವೆ, ಆ ಕಾರಣದಿಂದಲೇ ಬಿಡಿ ಬಿಡಿ ಅನುದಾನಕ್ಕೆ ಸೀಮಿತ ಮಾಡಲಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಟಿಕೆಟ್ ಪಡೆಯವಲ್ಲಿ ಉಂಟಾದ ಪೈಪೋಟಿ ಬಜೆಟ್‌ನವರೆಗೂ ಮುಂದುವರಿದಿದೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಆಸ್ಪದೆ ನೀಡಿದೆ. ರಾಯಚೂರು, ರಾಯಚೂರು ಗ್ರಾಮೀಣ, ಮಸ್ಕಿ ಸೇರಿದಂತೆ ಇನ್ನಿತರೆ ತಾಲೂಕುಗಳಿಗೆ ಭರಪೂರ ಅನುದಾನ ದೊರೆತರೆ ಸಿಂಧನೂರನ್ನು ಯಾಕೆ ನಿರ್ಲಕ್ಷಿಸಲಾಗಿದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.