ಕೊಪ್ಪಳ ಎಂಪಿ ಕ್ಷೇತ್ರ: ಸಂಗಣ್ಣ ಕರಡಿ ಅವರ ನಡೆ ಯಾವ ಕಡೆ ?

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 25

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವ ಬಗ್ಗೆ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳ ಮುನಿಸು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸ್ಪಷ್ಟ ನಿಲುವು ತಿಳಿಸದೇ ಹೈಕಮಾಂಡ್ ಕಾಲಹರಣಕ್ಕೆ ಮುಂದಾಗಿದೆ ಎಂದು 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅವರ ಬೆಂಬಲಿಗರು ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಪ್ರಶ್ನೆಗಳನ್ನು ಕೇಳುವ ಜೊತೆಗೆ, ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿರುವುದಲ್ಲದೇ, ಕ್ರಿಯಾಶೀಲ ಸಂಸತ್ ಪಟುವಾಗಿದ್ದರೂ ಏಕಾಏಕಿ ಟಿಕೆಟ್ ಕಟ್ ಮಾಡಿರುವುದು ಸರಿಯಾದ ಕ್ರಮವಲ್ಲ. ಆ ಮೂಲಕ ಸಂಗಣ್ಣ ಕರಡಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಕೆಲ ಬಣಗಳು ಹಾತೊರೆಯುತ್ತಿವೆ. ಇದಕ್ಕೆ ಸೊಪ್ಪು ಹಾಕಬಾರದು ಎಂದು ಹೈಕಮಾಂಡ್‌ಗೆ ಕೆಲವರು ಒತ್ತಾಯಿಸಿದ್ದಾರೆಂದು ಹೇಳಲಾಗಿದೆ.
ಮಾರ್ಚ್ 24ರ ಸಭೆಯಲ್ಲಿ ಏನಾಯ್ತು ?
ಮಾರ್ಚ್ 21ರಂದು ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು, ಹಿತೈಷಿಗಳು ಹಾಗೂ ಅಭಿಮಾನಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಬೆಂಬಲಿಗರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮಾತನಾಡಿದ್ದ ಹಾಲಿ ಸಂಸದರು ಹೈಕಮಾಂಡ್‌ಗೆ ೪ ದಿನಗಳ ಗಡುವು ಕೊಟ್ಟಿದ್ದರು. ತದನಂತರ ಮಾಜಿ ಸಿಎಂ ಯಡಿಯೂರಪ್ಪ ಅವರಾದಿಯಾಗಿ ಹಿರಿಯ ನಾಯಕರು ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ ಎಂದು ಅವರು ತಿಳಿಸಿದ್ದರು. ಆನಂತರ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಬೆಂಗಳೂರಿಗೆ ಬರುವಂತೆ ಸಂಗಣ್ಣ ಕರಡಿ ಅವರಿಗೆ ಹೈಕಮಾಂಡ್‌ನಿಂದ ಬುಲಾವ್ ಬಂದಿತ್ತು.
ಬಿಸಿ ಬಿಸಿ ಚರ್ಚೆ
ಸಭೆಯಲ್ಲಿ ತಾವು ಹೆಸರಿಸುವ ನಾಯಕರು ಇದ್ದರೆ ಮಾತ್ರ ಬೆಂಗಳೂರು ಸಭೆಗೆ ತೆರಳುವುದಾಗಿ ಸಂಗಣ್ಣ ಅವರು ತಿಳಿಸಿದ್ದಾರೆಂದು ಹೇಳಲಾಗಿತ್ತು. ಆದರೆ ಮಾರ್ಚ್ 24ರಂದು ಸಭೆ ನಡೆಯಿತೇ ? ಸಭೆಯಲ್ಲಿ ಏನು ತೀರ್ಮಾನವಾಯಿತು ? ಹೈಕಮಾಂಡ್ ನಾಯಕರು ಸಂಗಣ್ಣ ಕರಡಿ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಏನು ಭರವಸೆ ನೀಡಿದರು ? ಹಾಗಾದರೆ ಹಾಲಿ ಸಂಸದರ ಮುಂದಿನ ನಡೆ ಏನು ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.


Spread the love

Leave a Reply

Your email address will not be published. Required fields are marked *