Spread the love

(Politics : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 30

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿನೊಂದಿಗೆ ಅಪಾರ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳನ್ನು ಹೊಂದಿದ್ದರೂ, ಈಗಾಗಲೇ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ, ಸ್ಥಾನಮಾನದ ಭರವಸೆ ನೀಡಿ ಹಾಲಿ ಸಂಸದರಾದ ಸಂಗಣ್ಣ ಕರಡಿ ಅವರನ್ನು ಹೈಕಮಾಂಡ್ ಮನವೊಲಿಸಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ. ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ತಮ್ಮದೇ ಆದ ನೆಟವರ್ಕ್ ಇತ್ತು, ಅಭಿವೃದ್ಧಿ ಕೆಲಸಗಳಲ್ಲಿ ಸದಾ ಮುಂದಿದ್ದ ಅವರು, ಪಕ್ಷಬೇಧವೆಣಿಸದೇ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಪ್ರವೃತ್ತಿ ಹೊಂದಿದ್ದರು. ಈ ಬಗ್ಗೆ ಪ್ರತಿಪಕ್ಷದವರೂ ಸಹ ಹಲವುಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಿದೆ. ಇಂತಹ ಬಿಜೆಪಿ ನಾಯಕರನ್ನು ಪಕ್ಷದ ಹೈಕಮಾಂಡ್ ನಿರ್ಲಕ್ಷ್ಯ ಮಾಡಿರುವುದು ಒಪ್ಪಿತವಲ್ಲ ಎಂದು ಅವರ ಬೆಂಬಲಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸಭೆಯ ನಂತರ ಎಚ್ಚೆತ್ತ ಹೈಕಮಾಂಡ್
ಮಾರ್ಚ್ 21ರಂದು ಕೊಪ್ಪಳದಲ್ಲಿ ನಡೆದ ಹಾಲಿ ಸಂಸದರ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳ ಬೃಹತ್ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರು ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಮುಖಂಡರು, ಅಭಿಮಾನಿಗಳು, ಬೆಂಬಲಿಗರ ಮುಂದೆ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಂತೆ, ಹೈಕಮಾಂಡ್ ಎಚ್ಚೆತ್ತುಕೊಂಡಿದೆ ಎಂದು ಹೇಳಲಾಗಿದೆ. ಕೂಡಲೇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಲ್ಲದೇ, ಮಾರ್ಚ್ 25ರಂದು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಪಕ್ಷದ ಪ್ರಮುಖರು ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್ ಇಲ್ಲವೇ, ರಾಜ್ಯಸಭಾ ಸ್ಥಾನಮಾನದ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಹೈಕಮಾಂಡ್‌ನ ಯಾವೊಂದು ಮನವೊಲಿಕೆಗೂ ಅವರು ಪಟ್ಟು ಸಡಿಲಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾಂಗ್ರೆಸ್‌ನಿಂದ ಆಹ್ವಾನ ?
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್‌ನ ಶಿವರಾಜ್ ತಂಗಡಗಿ ಅವರು, ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದ್ದು, ಇದನ್ನು ಸಂಗಣ್ಣ ಕರಡಿ ಅವರು ನಯವಾಗಿ ತಿರಸ್ಕರಿಸಿರುವುದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನಡುವೆಯೂ ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನಮಾನದ ಭರವಸೆಯೊಂದಿಗೆ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಯತ್ನ ಮಾಡಲಾಗುತ್ತಿದೆ ಎಂದು ಕೆಲ ಮೂಲಗಳಿಂದ ಗೊತ್ತಾಗಿದೆ.
ಜನಾರ್ದನ ರೆಡ್ಡಿ ಬಿಜೆಪಿಗೆ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಕೊಪ್ಪಳ ಲೋಕಸಭಾ ಕಾಂಗ್ರೆಸ್ ವಲಯದಲ್ಲಿ ಚುರುಕಿನ ಪ್ರಕ್ರಿಯೆಗಳು ನಡೆಯುತ್ತಿದ್ದು, ಬಿಜೆಪಿಯಲ್ಲಿನ ಪ್ರಮುಖ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್‌ಗೆ ಕರೆತಂದು ಬಲ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಇದೆ.
ಹಾಲಿ ಸಂಸದ ಕೆ.ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ನಿರಾಕರಿಸಿದ್ದ ಕಾಂಗ್ರೆಸ್
ಈ ಹಿಂದೆ 2004ರಲ್ಲಿ ಕಾಂಗ್ರೆಸ್‌ನಿಂದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸಿಂಧನೂರಿನ ಕೆ.ವಿರೂಪಾಕ್ಷಪ್ಪ ಅವರು ಬಿಜೆಪಿಯ ಸಾಲೋಣಿ ನಾಗಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ 2009ರಲ್ಲಿ ಹಾಲಿ ಸಂಸದ ಕೆ.ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ಕಟ್ ಮಾಡಿದ್ದ ಕಾಂಗ್ರೆಸ್ ಬಸವರಾಜ ರಾಯರೆಡ್ಡಿ ಅವರಿಗೆ ಮಣೆ ಹಾಕಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಶಿವರಾಮಗೌಡ ಅವರ ವಿರುದ್ಧ ಬಸವರಾಜ ರಾಯರಡ್ಡಿ ಅವರು ಸೋಲುಂಡಿದ್ದರು. ಹಾಲಿ ಸಂಸದರಾಗಿದ್ದಾಗಲೇ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಕೆ.ವಿರೂಪಾಕ್ಷಪ್ಪ ಅವರು ಆಗ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದರೆಂದು, ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು ಎಂದು ಹೇಳಲಾಗಿತ್ತು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿಯೂ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿರುವುದರಿಂದ ಅದು ತಕ್ಕ ಬೆಲೆ ತೆರಲಿದೆ, ಸಂಗಣ್ಣ ಕರಡಿ ಅವರಿಗೆ ಅವರದ್ದೇ ವೈಯಕ್ತಿಕ ವರ್ಚಸ್ಸು, ಅಪಾರ ಬೆಂಬಲಿಗರ ಶಕ್ತಿ ಇದೆ. ಇದನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಅವರನ್ನು ನಿರ್ಲಕ್ಷಿಸಿರುವುದು ಸರಿಯಾದ ನಡೆಯಲ್ಲ ಎಂದು ಸಂಗಣ್ಣ ಕರಡಿ ಅವರ ಬೆಂಬಲಿಗರೊಬ್ಬರು ಹೇಳುತ್ತಾರೆ.


Spread the love

Leave a Reply

Your email address will not be published. Required fields are marked *