ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 17
ಪವಿತ್ರ ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಹೈದ್ರಾಬಾದಿ ಚಿಕನ್ ‘ಹಲೀಮ್’ಗೆ ಬೇಡಿಕೆ ಹೆಚ್ಚಿದ್ದು, ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಬಸವ ಸರ್ಕಲ್‌ನ ಹತ್ತಿರದ ರಾಯಲ್ ಹೋಟೆಲ್‌ನಲ್ಲಿ ತಯಾರಿಸುವ ಹಲೀಮ್ ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ತಿಂಗಳಲ್ಲಿ ವಿಶೇಷವಾಗಿ ಮಾರಾಟ ಮಾಡುವ ಹಲೀಮ್ ಬಹಳಷ್ಟು ಜನರ ಇಷ್ಟದ ಖಾದ್ಯವಾಗಿದೆ. ಗೋಧಿ, ಮಟನ್, ಚಿಕನ್ ಸೇರಿದಂತೆ ತರಹೇವಾರಿ ಆಹಾರ ಪದಾರ್ಥಗಳಿಂದ ತಯಾರಿಸುವ ಹಲೀಮ್ ರುಚಿಯ ಜೊತೆಗೆ ಉತ್ತಮ ಪೌಷ್ಟಿಕ ಆಹಾರವಾಗಿದೆ. ರಂಜಾನ್ ಮಾಸದಲ್ಲಿ ರೋಜಾ ಆಚರಿಸುವ ಮುಸ್ಲಿಂ ಬಾಂಧವರು ಸಂಜೆ ರೋಜಾ ಬಿಟ್ಟ ನಂತರ ಹಲೀಮ್ ಖರೀದಿಸುವುದು ವಾಡಿಕೆಯಾಗಿದೆ. ದಿನವೂ ಸಂಜೆ ಆಯೋಜಿಸುವ ಇಫ್ತಾರ್ ಕೂಟಗಳಲ್ಲಿ ಹಣ್ಣು-ಹಂಪಲು ಜೊತೆಗೆ ಕೆಲವರು ಹಲೀಮ್ ವಿತರಣೆ ಮಾಡುತ್ತಿದ್ದಾರೆ, ಹೀಗಾಗಿ ಹಲೀಮ್ ಬೇಡಿಕೆ ಹೆಚ್ಚಿದೆ.
ಹಲೀಮ್ ತಯಾರಿ ಹೇಗೆ ?
ಹೈದ್ರಾಬಾದಿ ಚಿಕನ್ ಹಲೀಮ್ ಖಾದ್ಯವನ್ನು ಮಾಂಸದ ಜೊತೆಗೆ ಪುಡಿ ಮಾಡಿದ ಗೋಧಿ, ತುಪ್ಪ, ಮೊಸರು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಹಸಿ ಮೆಣಸಿನಕಾಯಿ, ಮಸಾಲೆಗಳಾದ ಜೀರಿಗೆ, ಸಾಸಿವೆ, ದಾಲ್ಚಿನ್ನಿ, ಏಲಕ್ಕಿ, ಲವಂಗ, ಕರಿ ಮೆಣಸು, ಕೇಸರಿ, ಬೆಲ್ಲ, ನೈಸರ್ಗಿಕ ಗಮ್, ಮಸಾಲೆ, ಒಣ ಹಣ್ಣುಗಳಾದ ಪಿಸ್ತಾ, ಗೋಡಂಬಿ, ಅಂಜೂರು ಮತ್ತು ಬಾದಾಮಿಯನ್ನು ತಯಾರಿಸಲಾಗುತ್ತದೆ. ಹಾಗಾಗಿ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಿರುತ್ತದೆ ಎಂಬುದು ಹಲೀಮ್ ಖಾದ್ಯ ಪ್ರಿಯರ ಅಭಿಮತವಾಗಿದೆ.
1 ಪ್ಲೇಟ್ ಹಲೀಮ್‌ಗೆ 90 ರೂಪಾಯಿ:
ಹೈದ್ರಾಬಾದಿ ಚಿಕನ್ ಹಲಿಮ್‌ಗೆ ಹೋದ ವರ್ಷಕ್ಕಿಂತ ಈ ವರ್ಷ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಒಂದು ಪ್ಲೇಟ್ ಹಲೀಮ್‌ಗೆ 90 ರೂಪಾಯಿ ಹಾಗೂ ಪಾರ್ಸೆಲ್ ಹಲೀಮ್ ಬೇಕಿದ್ದರೆ 100 ರೂಪಾಯಿ ದರ ಇದೆ. ರುಚಿಯ ಜೊತೆಗೆ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುವ ಕಾರಣ ಬಹುತೇಕರು ಹಲೀಮ್ ಇಷ್ಟಪಡುತ್ತಾರೆ. ಈ ಖಾದ್ಯ ತಯಾರು ಮಾಡಲು ಬಹಳಷ್ಟು ಶ್ರಮ ಹಾಕಬೇಕು, ಪೂರ್ವ ತಯಾರಿಯೂ ಬೇಕು. ಸಂಜೆ 5 ಗಂಟೆ ನಂತರ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಹೋಟೆಲ್‌ಗೆ ಭೇಟಿ ನೀಡಿ ಕೊಳ್ಳುವವರಲ್ಲದೇ ಬೇರೆ ಕಡೆಯಿಂದಲೂ ಹೆಚ್ಚಿನ ಆರ್ಡರ್‌ಗಳು ಬರುತ್ತಿವೆ ಎಂದು ಕಳೆದ ಏಳೆಂಟು ವರ್ಷಗಳಿಂದ ಹಲೀಮ್ ತಯಾರಿಕೆಯಲ್ಲಿ ಅನುಭವವಿರುವ ಹೋಟೆಲ್ ಮಾಲೀಕ ಸೈಯ್ಯದ್ ಜಾಫರ್ ಹುಸೇನ್ ಹೇಳುತ್ತಾರೆ. ರಂಜಾನ್ ಮಾಸದ ಪ್ರಯುಕ್ತ ಹಲೀಮ್ ಅಲ್ಲದೇ ವಿಶೇಷವಾಗಿ ಕುಲ್ಫಿ ಕಬಾಬ್, ಕಟ್ಲಿಸ್, ಚಿಕನ್ ಕಾಡಿ, ಶಾಮಿ, ಚೀಸ್ ಕಬಾಬ್, ಚಿಕನ್ ಪಕೋಡಾ, ತಂದೂರಿ ದಾಲ್, ಶೀಕ್ ಕಬಾಬ್ ಸ್ಪೆಷಲ್, ಬಾಸ್ಮಿತಿ ಬಿರಿಯಾನಿ, ಧಮ್ ಬಿರಿಯಾನಿ (ಬಾಸ್ಮತಿ ರೈಸ್), ಲಾಲಿಪಪ್, ಪಕೋಡಾ, ತಂದೂರಿ ರೋಟಿ, ಚಿಕನ್ ಕಾಡಿ ಸೇರಿದಂತೆ ಇನ್ನಿತರೆ ಖಾದ್ಯಗಳು ದೊರೆಯುತ್ತವೆ ಎಂದು ಜಾಫರ್ ಹುಸೇನ್ ಹೇಳುತ್ತಾರೆ.