Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 15

ಇನ್ನೇನು ಲೋಕಸಭೆ ಕೊಪ್ಪಳ ಕ್ಷೇತ್ರದ ಚುನಾವಣೆಗೆ ೨೨ ದಿನ ಬಾಕಿ ಉಳಿದಿರುವ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಕ್ಷೇತ್ರದಾದ್ಯಂತ ಮತಯಾಚನೆಯಲ್ಲಿ ತೊಡಗಿದ್ದಾರೆ. ಟಿಕೆಟ್ ನೀಡುವಲ್ಲಿ ಉಂಟಾದ ಗೊಂದಲದಿಂದಾಗಿ ಬಿಜೆಪಿಯಲ್ಲಿ ತೆರೆಮರೆಯಲ್ಲಿ ಮುನಿಸು, ಬೇಗುದಿ ಹೆಚ್ಚಿದ್ದು, ಹಲವರಿಗೆ ‘ಒಳೇಟಿನ ಭಯʼ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಎರಡು ಬಾರಿ ಸಲೀಸಾಗಿ ಗೆದ್ದಿದ್ದ ಸಂಗಣ್ಣ ಕರಡಿ ಅವರು ಮೂರನೇ ಬಾರಿಯೂ ಟಿಕೆಟ್ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬದಲಾದ ರಾಜಕೀಯ ಚದುರಂಗದಾಟದಲ್ಲಿ ವೈದ್ಯ ಹಾಗೂ ಕುಷ್ಟಗಿ ಮಾಜಿ ಶಾಸಕ ಶರಣಪ್ಪ ಅವರ ಪುತ್ರ ಡಾ.ಬಸವರಾಜ ಕ್ಯಾವಟರ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಇದು ಹಾಲಿ ಸಂಸದರ ಮುನಿಸಿಗೆ ಕಾರಣವಾಗಿದೆ. ಮುನಿಸು ಶಮನ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ಇನ್ನಿಲ್ಲದ ಪ್ರಯತ್ನ ನಡೆಸಿದೆ ಎಂದೇ ಹೇಳಲಾಗಿದ್ದು, ಇದು ಎಷ್ಟು ಪರಿಣಾಮ ಬೀರಿದೆ ಎನ್ನುವುದು ಪಕ್ಷದ ಆಂತರಿಕ ವಲಯಕ್ಕೆ ಗೊತ್ತಿದೆ ಎಂದು ಹೆಸರೇಳಲಿಚ್ಚಿಸದ ಮುಖಂಡರೊಬ್ಬರು ಹೇಳುತ್ತಾರೆ.
ಮಾರ್ಚ್ 21 ಬೆಂಬಲಿಗರ ಸಭೆಯ ನಂತರ…
ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು, ಹಿತೈಷಿಗಳು ಹಾಗೂ ಅಭಿಮಾನಿಗಳು ಕೊಪ್ಪಳದಲ್ಲಿ ನಡೆಸಿದ ೮ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಸಂಗಣ್ಣ ಕರಡಿ ಅವರು ಹೈಕಮಾಂಡ್‌ನ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದಾದ ನಂತರ ಹೈಕಮಾಂಡ್ ಮಾರ್ಚ್ ೨೫ರಂದು ಸಂಗಣ್ಣ ಕರಡಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಆದಿಯಾಗಿ ಬಹಳಷ್ಟು ಹಿರಿಯ ಮುಖಂಡರು ಮುಂಬರುವ ದಿನಗಳಲ್ಲಿ ಸ್ಥಾನಮಾನದ ಭರವಸೆ ನೀಡಿ ಮನವೊಲಿಸಿದ್ದಾರೆಂದು ಹೇಳಲಾಗಿತ್ತು. ಇದಾದ ಬೆನ್ನಲ್ಲೇ ಸಂಗಣ್ಣ ಕರಡಿ ಅವರು ಅಭ್ಯರ್ಥಿ ಕ್ಯಾವಟರ್ ಅವರೊಂದಿಗೆ ಬಹಿರಂಗ ಪ್ರಚಾರದಲ್ಲಿ ಭಾಗವಹಿಸಿದ್ದರು. ಮುನಿಸು ತಣ್ಣಗಾಯಿತು ಎನ್ನುವಷ್ಟರಲ್ಲಿ ಪುನಃ ಒಳಬೇಗುದಿ ಹೆಚ್ಚಿದ್ದು, ಹಾಲಿ ಸಂಸದರ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ಅಸಮಾಧಾನ ಹೊಗೆ ಆರಿಲ್ಲ ಎಂದೇ ಹೇಳಲಾಗುತ್ತಿದೆ.
ಪಕ್ಷಾಂತರದ ಊಹಾಪೋಹ
ಟಿಕೆಟ್ ನಿರಾಕರಣೆಯ ಹಿನ್ನೆಲೆಯಲ್ಲಿ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ಗೆ ಹೋಗಲಿದ್ದಾರೆ, ಕಾಂಗ್ರೆಸ್ ಅವರಿಗೆ ಮುಂಬರುವ ದಿನಗಳಲ್ಲಿ ಸ್ಥಾನಮಾನ ನೀಡಲಿದೆ ಎಂದು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಇದುವರೆಗೂ ಆ ಬಗ್ಗೆ ಖಚಿತ ಮಾಹಿತಿಗಳು ದೊರೆತಿಲ್ಲ. ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಕರಡಿ ಸಂಗಣ್ಣ ಅವರನ್ನು ಬಹಿರಂಗವಾಗಿಯೇ ಕಾಂಗ್ರೆಸ್‌ಗೆ ಆಹ್ವಾನಿಸಿದ್ದರು, ಇದನ್ನು ಕರಡಿ ಅವರು ನಯವಾಗಿಯೇ ತಿರಸ್ಕರಿಸಿದ್ದು ವರದಿಯಾಗಿದೆ.
ಕಳೆದ ಚುನಾವಣೆಯಂತಿಲ್ಲ ಈ ಚುನಾವಣೆ !
ಕಳೆದ ಚುನಾವಣೆಯಂತೆ ಈ ಬಾರಿಯ ಚುನಾವಣೆ ಇಲ್ಲ, ಈ ಹಿಂದಿನ ಅಲೆ ತರೆಗಲೆಯಾಗಿ ಉರುಳಿದೆೆ. ಬಿಜೆಪಿ, ಕಾಂಗ್ರೆಸ್‌ನ ‘ಗ್ಯಾರಂಟಿ ಅಲೆ’ಗೆ ತತ್ತರಿಸಿದೆ. ಹಾಗಾಗಿ ಬಿಜೆಪಿ ಇನ್ನಿಲ್ಲದ ಪೊಲಿಟಿಕಲ್ ಸ್ಟಾçಟಜಿ ಮಾಡುತ್ತಿದೆ. ಕೆಲ ಮುಖಂಡರ ಮುನಿಸು, ಹಲವು ಕಾರ್ಯರ್ತರು ಅಸಮಾಧಾನ ಬಿಜೆಪಿಗೆ ‘ಭಾರ’ವಾಗವುದಂತೂ ಸತ್ಯ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.


Spread the love

Leave a Reply

Your email address will not be published. Required fields are marked *