ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಜ.27
ಇದು ಹೆಸಿರಿಗಷ್ಟೇ ರಾಯಚೂರು ಯೂನಿವರ್ಸಿಟಿ ! ಕಳೆದ ಮಾರ್ಚ್ನಲ್ಲಿ ಪದವಿ ಪರೀಕ್ಷೆ ನಡೆದು 10 ತಿಂಗಳಾದರೂ ಇಲ್ಲಿಯವರೆಗೂ ಫಲಿತಾಂಶ ಪ್ರಕಟಿಸಿಲ್ಲ !! ಗುಲ್ಬರ್ಗಾ ಯೂನಿವರ್ಸಿಟಿಯೇ ಎಷ್ಟೋ ಉತ್ತಮ ಇತ್ತು. ಈ ಯೂನಿವರ್ಸಿಟಿಯಾದಾಗಿನಿಂದ ಒಂದಿಲ್ಲೊಂದು ತಾಪತ್ರಯ ಅನುಭವಿಸುವಂತಾಗಿದೆ ಎಂದು ಜಿಲ್ಲೆಯ ಪದವಿ ವಿದ್ಯಾರ್ಥಿಗಳು ಗೊಣಗುತ್ತಿದ್ದಾರೆ.
ಆಡಳಿತದಲ್ಲಿ ತಾಳ-ಮೇಳ ಇಲ್ಲ, ಇತ್ತ ಚುನಾಯಿತ ಪ್ರತಿನಿಧಿಗಳ ಕಾಳಜಿಯೂ ಇಲ್ಲ.. ಹೀಗಾಗಿ ಯೂನಿವರ್ಸಿಟಿಯವರು ಆಡಿದ್ದೇ ಆಟ ಎನ್ನುವಂತಾಗಿದೆ. ಶೈಕ್ಷಣಿಕ ಬದ್ಧತೆಯೇ ಇಲ್ಲದಂತಾಗಿದ್ದು, ಯಾವಾಗ ಪರೀಕ್ಷೆ ನಡೆಸುತ್ತಾರೋ, ಯಾವಾಗ ಫಲಿತಾಂಶ ಪ್ರಕಟಿಸುತ್ತಾರೋ, ಇನ್ನೂ ಯಾವಾಗ ಎಕ್ಸಾಂ ಡೇಟ್ ಅನೌನ್ಸ್ ಮಾಡುತ್ತಾರೆಂಬುದೇ ತಿಳಿಯುವುದಿಲ್ಲ. ಆದರೆ, ಪರೀಕ್ಷಾ ಫೀಸು ಮಾತ್ರ ತಪ್ಪದೇ ಕಟ್ಟಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನೊಂದು ಅಳಲು ತೋಡಿಕೊಂಡಿದ್ದಾರೆ.
ಫಲಿತಾಂಶಕ್ಕಾಗಿ ‘ನಾಳೆ ಬಾ’
ಮಾರ್ಚ್ 2024ರಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ಸೇರಿದಂತೆ ಇನ್ನಿತರೆ ಪದವಿ ಪರೀಕ್ಷೆಗಳನ್ನು ಯೂನಿವರ್ಸಿಟಿ ನಡೆಸಿತ್ತು. ನಿಯಮಗಳನ್ವಯ ಆಗಸ್ಟ್ ಇಲ್ಲವೇ ಸೆಪ್ಟೆಂಬರ್‌ನಲ್ಲಿ ಫಲಿತಾಂಶ ಪ್ರಕಟಿಸಬೇಕಿತ್ತು. ಆದರೆ, ಇನ್ನೇನು ಮಾರ್ಚ್ 2025 ಬರಲು 2 ತಿಂಗಳು ಬಾಕಿ ಉಳಿದಿದೆ. ಇಲ್ಲಿಯವರೆಗೂ ಫಲಿತಾಂಶ ಪ್ರಕಟವಾಗದೇ ಇರುವುದು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ ಪರೀಕ್ಷೆ ಫಲಿತಾಂಶಕ್ಕಾಗಿ ‘ನಾಳೆ ಬಾ’ ಎನ್ನುವ ಸ್ಥಿತಿ ಉಂಟಾಗಿದೆ.
ಪರೀಕ್ಷೆಗಿಂತ ಶುಲ್ಕದ (ಫೀಸ್) ಮೇಲೆ ಕಣ್ಣು ?
ಯೂನಿವರ್ಸಿಟಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ಅವರಿಂದ ಪರೀಕ್ಷೆ ಶುಲ್ಕ ಸಂಗ್ರಹಿಸುವುದರಲ್ಲೇ ಆಸಕ್ತಿ ಇದ್ದಂತಿದೆ. ಇದಕ್ಕೆ ಸಾಕ್ಷಿಯೆಂಬAತೆ ದರ್ಡ್ ಸೆಮ್ ಪರೀಕ್ಷೆ ದಿನಾಂಕ ಇಲ್ಲಿಯವರೆಗೂ ಪ್ರಕಟಿಸಿಲ್ಲ, ಆದರೆ ಫೀಸ್ ಕಟ್ಟಿಸಿಕೊಂಡಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿ ಪರೀಕ್ಷೆ ನಡೆಯಬೇಕಿತ್ತು. ಆದರೆ ಜನವರಿ ಕೊನೆಯ ವಾರ ಬಂದರೂ ಇನ್ನೂವರೆಗೂ ಪರೀಕ್ಷೆ ನಡೆಸಿಲ್ಲ. ಹೀಗಾದರೆ ಹೇಗೆ ಎಂದು ವಿದ್ಯಾರ್ಥಿಗಳು ಯೂನಿವರ್ಸಿಟಿಯ ಅಸಮರ್ಪಕ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿದ್ದಾರೆ.
ಶೈಕ್ಷಣಿಕ ಆಶಿಸ್ತು ?
5ನೇ ಸೆಮ್ ಪರೀಕ್ಷೆ ಕೂಡ ನಡೆಸಿಲ್ಲ. ಈ ಎಕ್ಸಾಂ ಕೂಡ ಡಿಸೆಂಬರ್‌ನಲ್ಲೇ ನಡೆಯಬೇಕಿತ್ತು. 2024ರ ಸಾಲಿನ ಪದವಿ ಪರೀಕ್ಷೆಗಳ ಫಲಿತಾಂಶ 2025 ಬಂದರೂ ಪ್ರಕಟಿಸಿಲ್ಲ. ಇನ್ನೂ ವಿದ್ಯಾರ್ಥಿಯೊಬ್ಬರಿಗೆ ಪದವಿ ಮುಗಿದು 1 ವರ್ಷದ ನಂತರ ಮಾರ್ಕ್ಸ್ ಕಾರ್ಡ್ ಬಂದ ಉದಾಹರಣೆ ಇದೆ. ಇದರಿಂದ ಪಿಜಿಗೆ ಅಡ್ಮಿಶನ್ ಪಡೆಯಲು ಆಗದೇ ಆ ವಿದ್ಯಾರ್ಥಿ ವಂಚಿತರಾಗಿದ್ದಾರೆ. ಇಲ್ಲಿಯವರೆಗೂ ಪದವಿಯ 1ನೇ ಸೆಮ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗದೇ ಹೋಗಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೆಲವೊಬ್ಬ ವಿದ್ಯಾರ್ಥಿಗಳು ಹೆಚ್ಚು ವಿಷಯಗಳು ಬ್ಯಾಕ್ ಉಳಿದು ಬರೆಯಲು ಹೆಣಗಾಡುತ್ತಿದ್ದಾರೆ. ಇದರಿಂದ ಅವರ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯೂನಿವರ್ಸಿಟಿಯವರ ಶೈಕ್ಷಣಿಕ ಅಶಿಸ್ತಿನಿಂದ ಯಾದಗಿರ, ರಾಯಚೂರು ಭಾಗದ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಕ್ಸ್ ಕಾರ್ಡ್ ಫ್ರಿಂಟ್ ಮಾಡಲು ಮಷಿನ್ ಇಲ್ಲವಂತೆ ?
ಪದವಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಫ್ರಿಂಟ್ ಮಾಡಲು ಯೂನಿವರ್ಸಿಟಿಯ ಬಳಿ ಮಷಿನ್ ಇಲ್ಲವಂತೆ ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿವೆ. ಈ ನಡುವೆ ಪರೀಕ್ಷಾಗಿ ವೆಬ್ ಕಾಸ್ಟಿಂಗ್ ಅಳವಡಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾದರೆ ಕನಿಷ್ಠ ಮಷಿನ್ ಖರೀದಿಸಲು ಯೂನಿವರ್ಸಿಟಿಯ ಬಳಿ ಹಣವಿಲ್ಲವೇ ಹಾಗಾದರೇ ಇದಕ್ಕೆ ಹೊಣೆ ಯಾರು ? ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಸರಿಪಡಿಸದಿದ್ದರೆ ಹೋರಾಟ: ನಾಗರೆಡ್ಡೆಪ್ಪ ಬುದ್ದಿನ್ನಿ ಎಚ್ಚರಿಕೆ
ಗುಲ್ಬರ್ಗಾ ಯೂನಿವರ್ಸಿಟಿಯಿಂದ ರಾಯಚೂರು ಯೂನಿವರ್ಸಿಟಿಯಾದ ನಂತರ ಅತ್ಯಂತ ಹಿಂದುಳಿದ ರಾಯಚೂರು, ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಸುಧಾರಿಸಲಿದೆ ಎಂದು ತಿಳಿದಿದ್ದೆವು. ಆದರೆ ಬರು ಬರುತ್ತಾ ಯೂನಿವರ್ಸಿಟಿಯ ಬೇಜವಾಬ್ದಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಕಾಳಜಿ ಕೊರತೆಯಿಂದ ಈ ಭಾಗದ ಪದವಿ ಶಿಕ್ಷಣ ಇನ್ನಷ್ಟು ಅಧ್ವಾನ ಸ್ಥಿತಿಗೆ ಹೋಗುತ್ತಿದೆ. ಅಂಕಪಟ್ಟಿ ಮುದ್ರಿಸಲು ಮಷಿನ್ ಇಲ್ಲದೇ ಇರುವಂತಹ ಗತಿಗೇಡು ಪರಿಸ್ಥಿತಿಗೆ ಯೂನಿವರ್ಸಿಟಿ ಬಂದಿರುವುದು, ಇದು ಗೊತ್ತಿದ್ದರೂ ಯೂನಿವರ್ಸಿಟಿಯ ಕೊರತೆಗಳನ್ನು ಪರಿಹರಿಸಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಜಿಲ್ಲೆಯ ಎಮ್ಮೆಲ್ಲೆ, ಎಂಪಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೂಡಲೇ ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಯೂನಿವರ್ಸಿಟಿ ಆಡಳಿತ ಮಂಡಳಿ ಮುಂದಾಗಬೇಕು, ಇಲ್ಲದೇ ಹೋದರೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳೊAದಿಗೆ ಸೇರಿ ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ನಾಗರಡ್ಡೆಪ್ಪ ದೇವರಮನಿ ಬುದ್ದಿನ್ನಿ ಅವರು ಎಚ್ಚರಿಸಿದ್ದಾರೆ.