(ಪೊಲಿಟಿಕಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 7
ರಾಯಚೂರು ಜಿಲ್ಲೆಗೆ ಕಾಂಗ್ರೆಸ್ ಹೈಕಮಾಂಡ್ ಬಹಳ ದಿನಗಳ ನಂತರ ರಾಜಕೀಯವಾಗಿ ‘ತ್ರಿಬಲ್ ಧಮಾಕ’ ನೀಡಿದೆ. ಒಬ್ಬರಿಗೆ ಸಚಿವಗಿರಿ, ಇನ್ನಿಬ್ಬರಿಗೆ ಎಮ್ಮೆಲ್ಸಿ ಸ್ಥಾನದ ಉಡುಗೊರೆ ಕೊಟ್ಟು ಹಲವು ದಿನಗಳ ನಂತರ ಈ ಭಾಗದ ನಾಯಕರಿಗೆ ಮಣೆ ಹಾಕಿದೆ. ಸಂಖ್ಯಾಬಲದ ಆಧಾರದ ಮೇಲೆ ದೊರೆತ 7 ಸ್ಥಾನಗಳಿಗಾಗಿ ಕಾಂಗ್ರೆಸ್ನಲ್ಲಿ ತ್ರಿಬಲ್ ಡಜನ್ ಆಕಾಂಕ್ಷಿಗಳು ಇದ್ದರು. ಆದರೆ 7 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ರಾಯಚೂರು ಜಿಲ್ಲೆಯವರಿಗೇ ಮಣೆ ಹಾಕುವ ಮೂಲಕ ಭರ್ಜರಿ ಆಫರ್ ಒದಗಿಸಿದೆ.
ಪಕ್ಷದ ಸಂಘಟನೆ, ಸಮುದಾಯದ ಪ್ರಾತಿನಿಧ್ಯ, ಪ್ರಭಾವ, ಸಾಮಾಜಿಕ ನ್ಯಾಯ, ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರೊಂದಿನ ಒಡನಾಟ, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆ ಹಾಗೂ ಮುಂಬರುವ ಜಿ.ಪಂ, ತಾ.ಪಂ. ಚುನಾವಣೆಗಳ ಮುಂದಾಲೋಚನೆಯನ್ನಿಟ್ಟುಕೊಂಡು ಎಮ್ಮೆಲ್ಸಿ ಸ್ಥಾನಕ್ಕೆ ರಾಯಚೂರಿನ ಮೂವರಿಗೆ ಆದ್ಯತೆ ನೀಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಎಮ್ಮೆಲ್ಸಿಯಾಗಿದ್ದುಕೊಂಡು ಸಂಪುಟದಲ್ಲಿ ಸಚಿವಗಿರಿ ಪಡೆದ ಎನ್.ಎಸ್.ಭೋಸರಾಜು
ಪಕ್ಷದ ಸಂಘಟನೆ ಹಾಗೂ ರಾಜಕೀಯ ಚಾಣಾಕ್ಷತೆಯನ್ನು ಹೊಂದಿರುವ ಎನ್.ಎಸ್.ಭೋಸರಾಜು ಅವರು ಕಾಂಗ್ರೆಸ್ ಸರ್ಕಾರದಲ್ಲಿ ಎಮ್ಮೆಲ್ಸಿಯಾಗಿದ್ದುಕೊಂಡೇ ಸಚಿವಗಿರಿ ಪಡೆದ ವಿಶೇಷತೆ ಹೊಂದಿದ್ದಾರೆ. ಎಐಸಿಸಿ, ಕೆಪಿಸಿಸಿ ಹೈಕಮಾಂಡ್ನೊಂದಿಗಿನ ಒಡನಾಟ ಹಾಗೂ ಪಕ್ಷದ ಸಂಘಟನೆ, ಆಂಧ್ರ ಮತ್ತು ತೆಲಂಗಾಣದ ರಾಜಕೀಯ ಮುಖಂಡರೊಂದಿಗಿನ ಹಿಡಿತ ಅವರನ್ನು ರಾಜಕೀಯ ವಲಯದಲ್ಲಿ ಗುರುತಿಸುವಂತೆ ಮಾಡಿದ್ದು, ರಾಜ್ಯ ರಾಜಕೀಯದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕಮಾಂಡ್, ಭೋಸರಾಜು ಅವರ ಎಎಮ್ಮೆಲ್ಸಿ ಸ್ಥಾನದ ಅವಧಿ ಮುಗಿಯುತ್ತಿದ್ದಂತೆ ಪುನಃ ಅವರಿಗೆ ಮಣೆ ಹಾಕಿ ಸ್ಥಾನ ನೀಡಿದೆ. ಅಲ್ಲದೇ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ನ ಸಭಾ ನಾಯಕರೂ ಆಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ, ಹೈಕಮಾಂಡ್ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭೋಸರಾಜು ಅವರ ಪಕ್ಷ ಹಾಗೂ ಕಾರ್ಯಕರ್ತರ ಸಂಘಟನೆಯನ್ನು ಪರಿಗಣಿಸಿ ಸಚಿವಗಿರಿ ನೀಡಿದೆ ಎಂದು ಹೇಳಲಾಗುತ್ತಿದೆ.
ಪಕ್ಷ ಸಂಘಟನೆಯಿಂದ ಎಮ್ಮೆಲ್ಸಿ ಸ್ಥಾನಕ್ಕೆ ಎ.ವಸಂತಕುಮಾರ್
ಕೆಪಿಸಿಸಿಯ ಐವರು ವರ್ಕಿಂಗ್ ಪ್ರೆಸಿಡೆಂಟ್ಗಳಲ್ಲಿ ಒಬ್ಬರಾಗಿದ್ದ ಎ.ವಸಂತಕುಮಾರ್ ಅವರು ಪಕ್ಷ ಸಂಘಟನೆಯಿಂದ ಎಮ್ಮೆಲ್ಸಿ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆಂದೇ ಹೇಳಬಹುದು. ಕೆಪಿಸಿಸಿ, ರಾಯಚೂರು ಜಿಲ್ಲಾ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿರುವ ಅವರನ್ನು ಹೈಕಮಾಂಡ್ ವಿಧಾನ ಪರಿಷತ್ಗೆ ಆಯ್ಕೆ ಮಾಡಿದೆ. ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಒಂದು ಬಾರಿ ಸ್ಪರ್ಧಿಸಿದ್ದ ಅವರು, ಹಾಲಿ ಶಾಸಕ ಮಾನಪ್ಪ ವಜ್ಜಲ್ ಅವರೊಂದಿಗೆ ಪರಾಭವಗೊಂಡಿದ್ದರು. ತದನಂತರ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ರಾಜಕೀಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ಎಮ್ಮೆಲ್ಸಿಯಾಗಿದ್ದಾರೆ.
ಯುವ ಮುಖಂಡ ಬಸನಗೌಡ ಬಾದರ್ಲಿಗೆ ಹೈಕಮಾಂಡ್ ಮಣೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದ ಟಿಕೆಟ್ಗೆ ಪಟ್ಟು ಹಿಡಿದಿದ್ದ ಬಸನಗೌಡ ಬಾದರ್ಲಿ ಅವರಿಗೆ ಹೈಕಮಾಂಡ್, ಜಗದೀಶ್ ಶೆಟ್ಟರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಎಮ್ಮೆಲ್ಸಿಯಾಗಿ ಆಯ್ಕೆ ಮಾಡುವ ಮೂಲಕ ಮಣೆ ಹಾಕಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಐಸಿಸಿಯ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಸೇರಿದಂತೆ ಕಾಂಗ್ರೆಸ್ನ ಹಿರಿಯ ಮುಖಂಡರು, ಕೊಪ್ಪಳ ಲೋಕಸಭೆ ಟಿಕೆಟ್ ಇಲ್ಲವೇ ನಿಗಮ ಮಂಡಳಿಯಲ್ಲಿ ಸ್ಥಾನಮಾನದ ಭರವಸೆಯನ್ನು ನೀಡಿದ್ದೆರಂದು ಹೇಳಲಾಗಿತ್ತು. ಆದರೆ, ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೊಪ್ಪಳದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಎಮ್ಮೆಲ್ಸಿ ಸ್ಥಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.