(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 10
ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಕಳೆದ 11 ತಿಂಗಳಿಂದಲೂ 1 ಕೋಟಿ ರೂಪಾಯಿಗೂ ಹೆಚ್ಚು ವೇತನ ಪಾವತಿಯಾಗಿಲ್ಲ !! ಈ ಕುರಿತು ಹೊರಗುತ್ತಿಗೆ ಏಜೆನ್ಸಿಯವರಿಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ ವರ್ಕರ್ಗೆ ಮನವಿ ಮಾಡಿದರೂ ಹಲವು ಸಬೂಬು ಹೇಳುತ್ತ ಸಾಗಹಾಕಲಾಗುತ್ತಿದೆ ಹೊರತು ಹಣ ಬಿಡುಗಡೆ ಮಾಡದಿರುವುದು ತಿಳಿದುಬಂದಿದೆ. ಜಿಲ್ಲೆಯ ರಾಯಚೂರು, ಲಿಂಗಸುಗೂರು, ಮಾನ್ವಿ, ಸಿರವಾರ, ಮಸ್ಕಿ, ದೇವದುರ್ಗ ಹಾಗೂ ಸಿಂಧನೂರು ತಾಲೂಕಿನ ವಿವಿಧ ನಾಡ ಕಚೇರಿಗಳಲ್ಲಿ 52 ಡಾಟಾ ಎಂಟ್ರಿ ಆಪರೇಟರ್ಗಳು ಕೆಲಸ ಮಾಡುತ್ತಾರೆ. ಇವರನ್ನು ಹೊರಗುತ್ತಿಗೆ ಆಧಾರದ ಮೇಲೆ ಈ ಹಿಂದೆಯೇ ನೇಮಿಸಿಕೊಳ್ಳಲಾಗಿದ್ದು, ನಾಡ ಕಚೇರಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ಗಳೇ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆ ಒದಗಿಸುತ್ತಿದ್ದಾರೆ. ಆದರೆ, ನಾಡ ಕಾರ್ಯಾಲಯದ ಚಾಲನಾಶಕ್ತಿಯಾಗಿರುವ ಆಪರೇಟರ್ಗಳಿಗೆ ಕಳೆದ 11 ತಿಂಗಳಿಂದ ವೇತನ ಪಾವತಿ ಮಾಡದೇ ಇರುವುದರಿಂದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.
ನಾಡ ಕಾರ್ಯಾಲಯದ ಉಪ ತಹಸೀಲ್ದಾರ್ ಅವರ ನಿರ್ದೇಶನದಂತೆ ಕೆಲಸ ನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್ಗಳು, ಕಂದಾಯ ಇಲಾಖೆಯ ವಿವಿಧ ಅರ್ಜಿಗಳನ್ನು ಹಾಕುವುದು, ಸ್ವೀಕೃತಿ ನೀಡುವುದು, ಪಹಣಿ, ಮ್ಯುಟೇಶನ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವುದು ಸೇರಿದಂತೆ ರೈತರಿಗೆ ಬೆಳೆ ಪರಿಹಾರ, ಚುನಾವಣೆ ಕೆಲಸದ ಸಂದರ್ಭಗಳಲ್ಲಿ ಹಗಲು-ರಾತ್ರಿ ಸೇವೆ ಸಲ್ಲಿಸಿದರೂ ಕಳೆದ 11 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಆಪರೇಟರ್ಗಳು ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
ಪಗಾರ ಪಾವತಿಗೆ ನಾನಾ ಸಬೂಬು
ಕಂದಾಯ ಇಲಾಖೆಯಿಂದ ಹಣ ಬಿಡುಗಡೆಯಾಗಿದ್ದು, ಕಳೆದ ನಾಲ್ಕಾರು ತಿಂಗಳಿಂದ ವೇತನ ಪಾವತಿ ಮಾಡುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೇಸ್ ವರ್ಕರ್ ಹಾಗೂ ಹೊರಗುತ್ತಿಗೆ ಏಜೆನ್ಸಿಯವರಿಗೆ ಮನವಿ ಮಾಡುತ್ತಾ ಬಂದರೂ ನಾನಾ ಸಬೂಬು ಹೇಳುವ ಮೂಲಕ ನಾಳೆ, ನಾಡಿದ್ದು ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವೇತನ ವಿಳಂಬದಿಂದಾಗಿ ಡಾಟಾ ಎಂಟ್ರಿ ಆಪರೇಟರ್ಗಳು ಸಾಲ-ಸೋಲ ಮಾಡಿಕೊಳ್ಳುವಂತಾಗಿದ್ದು, ದಿನದಿಂದ ದಿನಕ್ಕೆ ಸಾಲ ಪಡೆದವರಿಂದ ಇನ್ನಿಲ್ಲದ ಮಾನಸಿಕ ಕಿರುಕುಳ ಎದುರಿಸುತ್ತಿದ್ದಾರೆ.
1 ಕೋಟಿ ರೂಪಾಯಿಗೂ ಹೆಚ್ಚು ವೇತನ ಬಾಕಿ
ರಾಯಚೂರು ಜಿಲ್ಲೆಯ ಏಳು ತಾಲೂಕುಗಳ ವಿವಿಧ ನಾಡ ಕಚೇರಿಯ ೫೨ ಡಾಟಾ ಎಂಟ್ರಿ ಆಪರೇಟರ್ಗಳ 11 ತಿಂಗಳ ಬಾಕಿ ವೇತನ 1 ಕೋಟಿ ರೂಪಾಯಿಗೂ ಹೆಚ್ಚಿದ್ದು, ಸಂಬಂಧಿಸಿದ ಇಲಾಖೆಯಿಂದ ಈಗಾಗಲೇ ಈ ಹಣ ಬಂದಿದ್ದು, ಆಪರೇಟರ್ಗಳಿಗೆ ವಿತರಣೆ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಮಾಸಿಕ ವೇತನ ಪಾವತಿ ಮಾಡಲಾಗಿದ್ದು, ರಾಯಚೂರು ಜಿಲ್ಲೆಯಲ್ಲೇ ಏಕೆ ವಿಳಂಬ ಮಾಡಲಾಗುತ್ತಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವೇತನ ವಿಳಂಬ, ಅನುಮಾನಕ್ಕೆ ಎಡೆ
ಈಗಾಗಲೇ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ ಎಂದು ಹೇಳಲಾಗುತ್ತಿದ್ದು, ಹೊರಗುತ್ತಿಗೆ ಏಜೆನ್ಸಿಯವರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ ವರ್ಕರ್ ಅವರ ಗಮನಕ್ಕೆ ತಂದರೂ ವೇತನ ಪಾವತಿ ಮಾಡದೇ ವಿಳಂಬ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರದಿಂದ ಯಾವಾಗ ಹಣ ಬಂದಿದೆ ?, ಯಾವ ಕಾರಣಕ್ಕೆ ಆಪರೇಟರ್ಗಳಿಗೆ ವೇತನ ಪಾವತಿ ಮಾಡುತ್ತಿಲ್ಲ ? ವಿಳಂಬ ಮಾಡುತ್ತಿರುವುದು ಏಕೆ ? ವೇತನ ಇಲ್ಲದೇ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರ್ಗಳು ಕೆಲಸದಲ್ಲಿ ನಿರುತ್ಸಾಹ ತೋರಿ, ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾದರೆ ಹೊಣೆ ಯಾರು ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.