ರಾಯಚೂರು/ಸಿಂಧನೂರು: ಎಡದಂಡೆ ಮುಖ್ಯ ಕಾಲುವೆ ರಿಪೇರಿ ವಿಳಂಬ, ತಳ ಕಾಣುತ್ತಿರುವ ಕೆರೆಗಳು; ಕುಡಿಯುವ ನೀರಿಗೆ ತತ್ವಾರ

Spread the love

* ಕೊಪ್ಪಳ, ರಾಯಚೂರು ಜಿಲ್ಲಾಡಳಿತಗಳ ನಿರ್ಲಕ್ಷ್ಯ, ನಾಗರಿಕರ ಆರೋಪ
* ಕಾಲುವೆ ಒಡೆದ ಪ್ರದೇಶಕ್ಕೆ ಕಾಟಾಚಾರಕ್ಕೆ ತೆರಳಿ, ಫೋಟೋಗೆ ಪೋಸು ಕೊಟ್ಟು ಹೋದ ಆಡಳಿತ ಪಕ್ಷಗಳ ಚುನಾಯಿತ ಪ್ರತಿನಿಧಿಗಳು
* ಜವಾಬ್ದಾರಿ ಮರೆತ ಪ್ರತಿಪಕ್ಷಗಳು, ಉಭಯ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ಸಂಕಷ್ಟ

ಸ್ಪೆಷಲ್ ಸ್ಟೋರಿ: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 27

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದ ಜಿಲ್ಲೆಯ ಜನರು ಕುಡಿವ ನೀರಿಗಾಗಿ ಹಾಹಾಕಾರ ಸ್ಥಿತಿ ಅನುಭವಿಸುತ್ತಿದ್ದರೆ, ಒಡೆದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ತುರ್ತು ರಿಪೇರಿಗೊಳಿಸುವಲ್ಲಿ ಕೊಪ್ಪಳ, ರಾಯಚೂರು ಜಿಲ್ಲಾಡಳಿತಗಳು ನಿರ್ಲಕ್ಷö್ಯವಹಿಸಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಕುಡಿವ ನೀರಿನ ಉದ್ದೇಶಕ್ಕೆ ದಿನಾಂಕ: 16-03-2026 ರಂದು ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗಿತ್ತು. ಆದರೆ, ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಹತ್ತಿರವಿರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲ್ ನಂ.13ರಲ್ಲಿ ದಿನಾಂಕ:18-03-2026 ರಂದು ತಡರಾತ್ರಿ ಒಡೆದು ಹೋಗಿತ್ತು. ಕಾಲುವೆ ಒಡೆದುಹೋದ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಹರಿಸುವುದನ್ನು ನಿಲುಗಡೆ ಮಾಡಲಾಗಿತ್ತು. ಕೆರೆಗೆ ಕಾಲುವೆ ನೀರು ಹರಿದು ಕುಡಿವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಹೊತ್ತಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೆ ಆಘಾತ ಉಂಟಾಗಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ತಳ ಕಾಣುತ್ತಿರುವ ಕೆರೆಕಟ್ಟೆಗಳು
ಮಾರ್ಚ್ 16ರಿಂದ 27ರವರೆಗೆ ಎಡದಂಡೆ ನಾಲೆಗೆ ನೀರು ಹರಿಬಿಡಲು ನಿರ್ಧರಿಸಲಾಗಿತ್ತು. ಆದರೆ ಕಾಲುವೆ ನೀರು 104ನೇ ಮೈಲ್‌ಗೆ ತಲುಪುವುದರೊಳಗೆ ಕಾಲುವೆ ಒಡೆದು ಹೋಗಿದ್ದು, ರಾಯಚೂರು ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಕೆರೆಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ತಳ ಕಾಣುತ್ತಿದ್ದು, ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಇದರಿಂದ ಜನ, ಜಾನುವಾರುಗಳು ಕುಡಿಯುವ ನೀರಿನ ತತ್ವಾರ ಎದುರಿಸುತ್ತಿದ್ದಾರೆ.
ಒಡೆದ ಕಾಲುವೆ ದುರಸ್ತಿಗೆ ಇನ್ನೂ 3 ದಿನ ಸಾಧ್ಯತೆ
ಮಾರ್ಚ್ 27 ಆದರೂ ಹನಿ ನೀರು ಕುಡಿಯುವ ನೀರಿನ ಕೆರೆಗಳಿಗೆ ಹರಿಯದೇ ಇರುವುದು ಗ್ರಾಮೀಣ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಒಡೆದ ಕಾಲುವೆ ದುರಸ್ತಿಗೆ ಇನ್ನೂ ಕೆಲವು ದಿನ ಬೇಕಾಗಬಹುದೆಂಬ ಮಾಹಿತಿ ಇದ್ದು, ಅಂತೂ ಇಂತೂ ಏಪ್ರಿಲ್‌ನಲ್ಲಿ ಕಾಲುವೆಗೆ ನೀರುವ ಹರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲಿಯವರೆಗೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವುದು ಅನಿವಾರ್ಯ ಎನ್ನುವಂತಾಗಿದೆ.
ಅಧೀಕ್ಷಕ ಅಭಿಯಂತರರ ಪ್ರಕಟಣೆ
ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ನೀರಿನ್ನು ಹರಿಸಲು ನಿರ್ಧರಿಸಲಾಗಿದೆ. ನಿಗದಿತ ಪ್ರಮಾಣದ ನೀರನ್ನು 104 ಮೈಲ್ ವರೆಗೆ ಹರಿಸಿ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸಮರ್ಪಕ ನೀರು ನಿರ್ವಹಣೆ ಮಾಡಲು ಕೋರಲಾಗಿದೆ ಎಂದು ದಿನಾಂಕ: 11-03-2026ರಂದು ಅಧೀಕ್ಷಕ ಅಭಿಯಂತರರು. ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಇವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ನೀರು ಹರಿಸಲು ನಿಗದಿಪಡಿಸಿದ್ದ ವೇಳಾಪಟ್ಟಿ
ಕುಡಿಯುವ ನೀರಿಗಾಗಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ದಿನಾಂಕ:16.03.2026 (ಸೋಮವಾರ ಬೆಳಗ್ಗೆ 8.00 ಗಂಟೆ) ರಿಂದ 27.03.2026 (ಶುಕ್ರವಾರ ಬೆಳಗ್ಗೆ 8.00 ಗಂಟೆ) ರವರೆಗೆ 2000 ಕ್ಯೂಸೆಕ್‌ನಂತೆ ಕುಡಿಯುವ ನೀರು ಹರಿಸಲಾಗುವುದು. ಅದರಂತೆ, ಯರಮರಸ್ ವಿಭಾಗ ದಿನಾಂಕ:19.03.2026, 20.03.2026, 21.03.2026 ರವರೆಗೆ, ಸಿರವಾರ ವಿಭಾಗ ದಿನಾಂಕ:21.03. 2026, 22.03.2026, 23.03.2026 ರವರೆಗೆ, ಸಿಂಧನೂರು ವಿಭಾಗ 24.03.2026, 25.03.2026, 26.03.2026 ರವರೆಗೆ ಮತ್ತು ವಡ್ಡರಹಟ್ಟಿ ವಿಭಾಗ ದಿನಾಂಕ: 26.03.2026, 27.03.2026 ರವರೆಗೆ ವೇಳಾಪಟ್ಟಿ ನಿಗದಿಪಡಿಸಲಾಗಿತ್ತು.

Namma Sindhanuru Click For Breaking & Local News
ಮಸ್ಕಿ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕುಡಿಯುವ ನೀರಿನ ಕೆರೆಯ ದೃಶ್ಯ.

“ಕಾಲುವೆ ರಿಪೇರಿ ಗಂಭೀರವಾಗಿ ಪರಿಗಣಿಸಿಲ್ರಿ”
“ಕಾಲೇವುಕ ನೀರು ಬಿಟ್ಟು ಎರಡು ದಿನದಾಗ ಒಡ್ದ ಹೋಗೇತ್ರಿ. ಕಾಲೇವಕ ನೀರು ಬಿಡಾಕಿನ ಮುಂಚೆ ಒಂದೀಟು ಗಮನಿಸಿದ್ರ ಇಂತ ಪರಿಸ್ಥಿತಿ ರ‍್ತಿರ‍್ಲಿಲ್ಲ. ಇವ್ರಿಗೆ ಯಾರ್ ಹೇಳ್ಬೇಕ್ರಿ. ಮಾರ್ಚ್ 16ರಿಂದ 27ರ ತನಕ ನೀರು ಬಿಡ್ತೀವಿ ಅಂತ ಹೇಳಿದ್ರೂ, ಈಗ ನೋಡಿದ್ರ 27ನೇ ತಾರೀಖಿನವರೆಗೆ ರಿಪೇರಿನೇ ನಡಿತೈತಿ ಅನ್ನಂಗಾಗೇತಿ. ಜನ್ರು ಕುಡೇ ನೀರಿಗೆ ಪಡೋ ಪಡಿಪಾಟಲು ಈ ಅಧಿಕಾರಿಗುಳಿಗೆ, ಮಿನಿಸ್ಟುç, ಎಮ್ಮೆಲ್ಲೆಯವರಿಗೆ ಅರ್ಥ ಆಗವಲ್ತು. ಎರಡು ಬೆಳಿ ಇದ್ದಾಗ ಹಿಂಗೇನನ ಕಾಲೇವು ಒಡದು, ರಿಪೇರಿ ಕೆಲ್ಸ ವಾರಗಟ್ಲೆ ಆಗಿತ್ತಂದ್ರ ರೈತ್ರು ಸುಮ್ನಿರುತಿದ್ರನು, ಬೆಳಿ ಉಳಿತಿದ್ವನು” ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಏಪ್ರೀಲ್‌ ಮೊದಲ ವಾರದಲ್ಲಿ ಕಾಲುವೆಗೆ ನೀರು ಸಾಧ್ಯತೆ ?
ಕುಡಿಯುವ ನೀರಿನ ಕೆರೆಗಳನ್ನು ಏಪ್ರಿಲ್‌ ಮೊದಲ ವಾರದಲ್ಲಿ ಕಡ್ಡಾಯವಾಗಿ ತುಂಬಿಸುಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಹೀಗಾಗಿ ಏಪ್ರಿಲ್‌ ಮೊದಲ ವಾರದಲ್ಲಿ ಕುಡಿಯುವ ನೀರು ನಾಲೆಗೆ ಹರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Spread the love

Leave a Reply

Your email address will not be published. Required fields are marked *