ನಮ್ಮ ಸಿಂಧನೂರು, ಜುಲೈ 12
ಸರ್ಕಾರಿ, ಸರ್ಕಾರಿ ಹೆಚ್ಚುವರಿ, ಖಾರೀಜಖಾತಾ ಪರಂಪೋಕ್ ಭೂಮಿಯನ್ನು ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ಕೊಡಬೇಕು ಹಾಗೂ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್)ದಿಂದ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿಪತ್ರ ರವಾನಿಸಲಾಯಿತು.
ʼಸರ್ಕಾರಗಳಿಂದ ಭೂಹೀನ ರೈತರು, ವಸತಿ, ನಿವೇಶನ ರಹಿತರ ನಿರ್ಲಕ್ಷ್ಯʼ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, 2018 ಅವಧಿಯಲ್ಲಿ ಫಾರಂ-57 ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಬಡ ರೈತರಿಗೆ ಭೂ ಮಂಜೂರಾತಿ ದೊರೆತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲಾವಧಿಯಲ್ಲಿ (2018ರಲ್ಲಿ) ಜಾರಿ ಮಾಡಿದ ಅಕ್ರಮ-ಸಕ್ರಮ (ಬಗರ್ ಹುಕುಂ) ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ನೋವಿನ ಸಂಗತಿ. ಈ ಹಿಂದೆ ಫಾರಂ ನಂ.50, 53 ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಕೂಡಾ ಪಟ್ಟಾ ಸಿಕ್ಕಿಲ್ಲ. 2019ರಿಂದ 2023 ರವರೆಗೆ ಅಧಿಕಾರ ನಡೆಸಿದ ಬಿಜೆಪಿಯ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇವರ ನೇತೃತ್ವದ ಸರ್ಕಾರ ಕೂಡ ಬಡ ರೈತರಿಗೆ ಭೂ ಮಂಜೂರಾತಿ ಕೊಡುವ ಕಾರ್ಯ ಮಾಡಲಿಲ್ಲ. ತದ್ವಿರುದ್ಧ ಎನ್ನುವಂತೆ ಆಗಿನ ಕಂದಾಯ ಮಂತ್ರಿ ಆರ್.ಅಶೋಕ ಅವರು ಸರ್ಕಾರಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ, ಭೂ ಮಾಫಿಯಾಗಳಿಗೆ ಗುತ್ತಿಗೆ ಕೊಡಲು ತೀರ್ಮಾನಿಸಿದ್ದರು. ಮುಖ್ಯವಾಗಿ ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಂತ ಬಲಿಷ್ಠರು ಅತಿಕ್ರಮಿಸಿ ಕಾಫಿ ಬೆಳೆ ಬೆಳೆದಿರುವ ಭೂಮಿಯನ್ನು ಅತಿಕ್ರಮಣಕಾರರಿಗೆ (ಪ್ರತಿಯೊಂದು ಕುಟುಂಬಕ್ಕೆ 25 ಎಕರೆಗಿಂತ ಹೆಚ್ಚು ಭೂಮಿ) ಗುತ್ತಿಗೆ ಕೊಡುವ ಕಾರ್ಯ ನಡೆದಿತ್ತು. ಆ ಭಾಗದಲ್ಲಿ ನಮ್ಮ ಸಂಘಟನೆ ಮತ್ತು ಆದಿವಾಸಿಗಳು ಇತರೆ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ನಂತರ ಗುತ್ತಿಗೆ ಕೊಡುವ ಕಾರ್ಯ ನಿಂತಿತ್ತು ಎಂದು ಹೇಳಿದರು.
ʼಸರ್ಕಾರಿ ಭೂಮಿ ಕಾರ್ಪೋರೇಟ್ ಕಂಪನಿಗಳಿಗೆ ಲೀಸ್ ಹಾಕುವುದು ಕೈಬಿಡಿʼ
ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ ಮಾತನಾಡಿ, ರಾಜ್ಯದಲ್ಲಿರುವ ಸರ್ಕಾರಿ ಭೂಮಿಯನ್ನು ಆಡಿಟಿಂಗ್ ಮಾಡಲಾಗುತ್ತಿದೆ ಎಂದು ಇತ್ತೀಚಿಗೆ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಸರ್ಕಾರದ ಉದ್ದೇಶ ಅರ್ಥವಾಗುತ್ತಿಲ್ಲ. ಇನ್ನೊಂದು ಕಡೆ ಬೆಂಗಳೂರು ಸುತ್ತಮುತ್ತಲಿನ 25 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಲೀಜ್ ಕೊಡಲು ಮುಂದಾಗಿರುವುದು ಸರಿಯಾದ ಬೆಳವಣಿಗೆಯಲ್ಲ. ವರಮಾನ ಸಂಗ್ರಹಕ್ಕಾಗಿ 25 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಕಂಪನಿಗಳಿಗೆ ಒತ್ತೆ ಹಾಕುವ ತೀರ್ಮಾನವನ್ನು ಸರ್ಕಾರ ವಾಪಸ್ ಪಡೆಯಬೇಕು. ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಲು ಕಾರ್ಪೋರೇಟ್ ಕಂಪನಿಗಳಿಗೆ ಹಾಗೂ ನೂರಾರು ಎಕರೆ ಭೂಮಿ ಹೊಂದಿದವರಿಗೆ, ದೊಡ್ಡ ಉದ್ದಿಮೆದಾರರಿಗೆ ತೆರಿಗೆ ಹೆಚ್ಚಳ ಮಾಡಬೇಕು. ಈ ಕಾರ್ಯ ಮಾಡಲು ಮುಂದಾಗದೇ ಸರ್ಕಾರಿ ಭೂಮಿ ಮಾರಾಟ ಮಾಡುವ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಭೂಮಿ ಒತ್ತೆ ಹಾಕುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ. ರಾಜ್ಯಾದ್ಯಂತ ಲಕ್ಷಾಂತರ ಬಡ ರೈತರು, ದಲಿತರು, ಆದಿವಾಸಿಗಳು ಮೂರು ತಲೆ ಮಾರಿನಿಂದ ಸಾಗುವಳಿ ಮಾಡುವ ಭೂಮಿಗೆ ಪಟ್ಟಾ ಕೊಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸರ್ಕಾರದ ನಡೆಯ ವಿರುದ್ಧ ಸಿಟ್ಟು ಹೊರಹಾಕಿದರು.
ʼಲಂಚ ಕೊಟ್ಟವರಿಗೆ ಆದ್ಯತೆ ಆರೋಪʼ
ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಮಾತನಾಡಿ, ಕಂದಾಯ ಅಧಿಕಾರಿಗಳು ಜನರು ಸಾಗುವಳಿ ಮಾಡುವ ಭೂಮಿಗೆ ಭೇಟಿಕೊಟ್ಟು ಸ್ಥಳ ತನಿಖೆ ಮಾಡದೇ, ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವುದು ಖಂಡನೀಯ. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಲಂಚ, ಹಣ ಕೊಟ್ಟಂತವರ ಭೂಮಿ ಮಾತ್ರ ಪಂಚನಾಮೆ ಮಾಡುತ್ತಿದ್ದಾರೆ. ಈ ಹಿಂದೆ ಇದ್ದ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ಅವರು ಕಳೆದ ಎರಡು ವರ್ಷಗಳಿಂದ ಹಲವು ಸಂದರ್ಭದಲ್ಲಿ ನಾವು ನಡೆಸಿದ ಧರಣಿ ಸ್ಥಳಕ್ಕೆ ಬಂದು ಭೂ ಸಮಸ್ಯೆಗಳ ಕುರಿತು ಸಭೆ ಕರೆಯುವುದು ಭೂ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದರು. ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಭೂ ಮಂಜೂರಾತಿ ಕುರಿತು ನಿರ್ಲಕ್ಷಿಸಿದ್ದಾರೆ. ಬೆಳೆ ಪರಿಹಾರದ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಿದೆ. ಲಂಚ ಕೊಟ್ಟಂತ ರೈತರ ಬೆಳೆ ನಷ್ಟವಾಗಿದೆ ಎಂದು ವರದಿ ಕೊಡುವ ಅಧಿಕಾರಿಗಳು ನಿಜವಾಗಿಯೂ ಬೆಳೆ ನಷ್ಟವಾದ ರೈತರ ಹೊಲಗಳಿಗೆ ಕಾಲಿಡುವುದಿಲ್ಲ ಎಂದು ದೂರಿದರು.
16 ಬೇಡಿಕೆಗಳ ಮನವಿಪತ್ರ ಸಿಎಂಗೆ ರವಾನೆ
ಈ ಸಂದರ್ಭದಲ್ಲಿ 16 ಬೇಡಿಕೆಗಳ ಮನವಿಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರಿಗೆ ನೀಡಲಾಯಿತು. ತದನಂತರ ಜಿಲ್ಲಾಧಿಕಾರಿ ನಿತೀಶ್.ಕೆ.ಅವರಿಗೆ ಮನವಿ ಸಲ್ಲಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಲಾಯಿತು. ಈ ವೇಳೆ ಪ್ರತಿಭಟನೆಯಲ್ಲಿ ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾಕಾರ್ಯದರ್ಶಿ ಬಿ.ಎನ್.ಯರದಿಹಾಳ, ಸಿಂಧನೂರು ತಾಲೂಕು ಅಧ್ಯಕ್ಷ ಚಿಟ್ಟಿಬಾಬು, ಶಿವರಾಜ್ ಮಾನ್ವಿ, ಹನುಮಂತ ಸಿರವಾರ, ಶೇಖರಯ್ಯ ಗೆಜ್ಜಲಗಟ್ಟಾ, ಗೌಸ್‌ಖಾನ್ ಗುಂತಗೋಳ, ನಾಗರಾಜ ಬೊಮ್ಮನಾಳ, ಹುಲಿಗೆಪ್ಪ ಸಿರವಾರ, ವೀರೇಶ ನಾಯಕ, ಛತ್ರಗೌಡ ಮಸ್ಕಿ, ಯಮನೂರಪ್ಪ ರತ್ನಾಪುರ ಹಟ್ಟಿ, ಬಸನಗೌಡ ಮಾಂಪೂರ, ಸಂಗಯ್ಯ ರಾಮದುರ್ಗ, ಹುಲಿಗೆಪ್ಪ ಸಿರವಾರ, ಎಐಆರ್‌ಡಬ್ಲುö್ಯಒನ ರೇಣುಕಮ್ಮ, ಮರಿಯಮ್ಮ ಮತ್ತಿತರರು ಭಾಗವಹಿಸಿದ್ದರು.