ರಾಯಚೂರು: ಜೋಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಕರ್ನಾಟಕ ರೈತ ಸಂಘ ಮನವಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 2

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೊಂದು ಜೋಳದ ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗೂ ಜೋಳ ಖರೀದಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಂಚನೆ-ಭ್ರಷ್ಟಾಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘ(ಎಐಯುಕೆಎಸ್)ದಿಂದ ಜಿಲ್ಲಾಧಿಕಾರಿ ಅವರಿಗೆ ಸೋಮವಾರ ರಾಯಚೂರಿನಲ್ಲಿ ಮನವಿಪತ್ರ ಸಲ್ಲಿಸಲಾಯಿತು.
ಖರೀದಿ ಕೇಂದ್ರ ವಿಳಂಬದಿಂದ ರೈತರಿಗೆ ಆರ್ಥಿಕ ನಷ್ಟ
ಜೋಳ ಕಟಾವು ಕಾರ್ಯ ಮುಗಿದು ಒಂದು ತಿಂಗಳು ಕಳೆದಿದೆ. ಕಳೆದ 2 ತಿಂಗಳಿನಿಂದ ನೋಂದಣಿ ಕಾರ್ಯದಲ್ಲಿ ಕಾಲಹರಣ ಮಾಡುತ್ತಿರುವುದು ಅತ್ಯಂತ ಖಂಡನೀಯ. ಖಾಲಿ ಚೀಲ ಖರೀದಿಸುವ ನೆಪದಲ್ಲಿ ಖರೀದಿ ಕೇಂದ್ರ ತೆರೆಯದೇ ವಿಳಂಬ ಮಾಡಿರುವುದು ಸರ್ಕಾರ, ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಕೆಲವು ರೈತರು ಬೆಳೆ ಬೆಳೆಯಲು ಸಾಲ ಇತರೆ ಕಾರಣಗಳಿಂದ ಖಾಸಗಿ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟಕ್ಕೊಳಗಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರ ತೆರೆಯದ ಕಾರಣದಿಂದ, ಕನಿಷ್ಠ ಬೆಂಬಲ ಬೆಲೆಯ ಲಾಭ ವರ್ತಕರಿಗೆ ದೊರೆಯುತ್ತದೆ. ರೈತರ ಆರ್ಥಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ದಲ್ಲಾಳಿಗಳು, ಕಡಿಮೆ ಬೆಲೆಗೆ ಖರೀದಿಸಿ, ಅವರ ಹೆಸರಿನಲ್ಲಿ ನೋಂದಣಿ ಮಾಡಿಸಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಭ್ರಷ್ಟಾಚಾರದ ವ್ಯವಹಾರದಲ್ಲಿ ಸ್ಥಳೀಯ ಸೊಸೈಟಿ (ಸಹಕಾರ ಸಂಘಗಳು)ಯ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಶ್ಯಾಮೀಲಾಗಿದ್ದಾರೆ. ಇಂತಹ ಅಧಿಕಾರಿಗಳು ಖಾಸಗಿ ವ್ಯಾಪಾರಿಗಳೊಂದಿಗೆ, ಒಳ ಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸುತ್ತ ಬಂದಿರುತ್ತಾರೆ.ಕಳೆದ ಎರಡು ವರ್ಷಗಳಿಂದ ಅನೇಕ ದೂರುಗಳನ್ನು ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಳೆದ ವರ್ಷ ತನಿಖಾ ತಂಡ ಸಿಂಧನೂರು ಸೇರಿ ಜಿಲ್ಲೆಯ ಇತರೆ ತಾಲೂಕಿನಲ್ಲಿ ತನಿಖೆ ಕೈಗೊಂಡರೂ ಅಕ್ರಮ ಪತ್ತೆಹಚ್ಚಿ ಯಾವ ಅಧಿಕಾರಿಗಳನ್ನು ಶಿಕ್ಷೆಗೊಳಪಡಿಸಿರುವುದಿಲ್ಲ. ಒಳಗಿಂದೊಳಗೆ ಅಕ್ರಮ-ವ್ಯವಹಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಯಿತು. ಇಂತಹ ಬೆಳವಣಿಗೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಗಮನ ಸೆಳೆದರು.
ಹಕ್ಕೊತ್ತಾಯಗಳು
ಖರೀದಿ ಕೇಂದ್ರವನ್ನು ನಿರ್ವಹಿಸುವ ಅಧಿಕಾರಿಗಳು, ಜೋಳ, ನುಸಿ ಇದೆ, ಹಸಿ ಇದೆ ಇತರೆ ಗುಣಮಟ್ಟದ ನೆಪದಲ್ಲಿ ಅನಗತ್ಯವಾಗಿ ರೈತರಿಗೆ ತೊಂದರೆ ಕೊಡುತ್ತಿದ್ದು, ಇಂತಹ ಸಮಸ್ಯೆಗಳಾಗದಂತೆ ಕ್ರಮ ವಹಿಸಬೇಕು, ಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಸಿಕೊಳ್ಳಲು ಪ್ರತಿ ಲೋಡ್‌ಗೆ 5 ರಿಂದ 10 ಸಾವಿರ ಲಂಚ ವಸೂಲಿ ಮಾಡಲಾಗುತ್ತಿದ್ದು, ಲಂಚ ಕೊಡಲು ನಿರಾಕರಿಸುವ ರೈತರ ಜೋಳವನ್ನು ಸಂಗ್ರಹಿಸದೇ ವಾಪಸ್ ಕಳುಹಿಸಲಾಗುತ್ತಿದೆ. ಇಂತಹ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಹಾಗೂ ರೈತ ಸಂಘಟನೆಗಳ ಮುಖಂಡರು, ಅಧಿಕಾರಿಗಳನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿ ರಚನೆ ಮಾಡಬೇಕು, ವರ್ತಕರು, ದಲ್ಲಾಳಿಗಳು (ಸ್ಥಳೀಯರ ಹೆಸರಿನಲ್ಲಿ ನೋಂದಣಿ ಮಾಡಿಸಿರುವ) ಹೊರ ರಾಜ್ಯಗಳಿಂದ ಅಕ್ರಮವಾಗಿ ಜಿಲ್ಲೆಗೆ ಸಾಗಿಸುವ ಜೋಳದ ಲಾರಿಗಳ ಕುರಿತು ಕಟ್ಟುನಿಟ್ಟಿನ ನಿಗಾ ವಹಿಸಬೇಕು, ಜೋಳ ಖರೀದಿಯಾದ ಒಂದು ವಾರದೊಳಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು, ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ನಡೆದ ಜೋಳದ ಅಕ್ರಮ ಖರೀದಿ ಮತ್ತು ಸಾಗಾಣಿಕೆ ವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳುಳ್ಳ ಮನವಿಪತ್ರವನ್ನು ಜಿಲ್ಲಾಧಿಕಾರಿ ನಿತೀಶ್.ಕೆ.ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ರಾಜ್ಯ ಸಮಿತಿ ಸದಸ್ಯರಾದ ಚಿಟ್ಟಿಬಾಬು, ರಮೇಶ ಪಾಟೀಲ್ ಭೇರಿಗಿ, ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್, ಜಿಲ್ಲಾ ಕಾರ್ಯದರ್ಶಿ ಹುಲಿಗೆಪ್ಪ ಸಿರವಾರ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *