(ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 2
ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಸೂರ್ಯ ‘ಪ್ರತಾಪ’ ಮುಂದುವರಿದಿದ್ದು, ರಾಯಚೂರು ತಾಲೂಕಿನ ಗಿಲ್ಲೇಸೂಗೂರಿನಲ್ಲಿ ಬುಧವಾರ 45.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ಇಡೀ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ತಾಪಮಾನ ಸಾರ್ವಕಾಲಿಕ ದಾಖಲೆಯಾಗಿದೆ. ಮಂಗಳವಾರ ಸಿಂಧನೂರು ತಾಲೂಕಿನ ಬಾದರ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ 45 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಕಳೆದ ವಾರದಿಂದ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಸೆಖೆ ಹೆಚ್ಚಾಗಿ ಉಸಿರುಗಟ್ಟಿದ ಅನುಭವವಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬಿಸಿ ಗಾಳಿ ಊಷ್ಣ ಮಾರುತಗಳ ಎಫೆಕ್ಟ್
ಕಳೆದ ವಾರದಿಂದ ಹೆಚ್ಚುತ್ತಿರುವ ತಾಪಮಾನಕ್ಕೆ ಊಷ್ಣ ಮಾರುತಗಳ ಎಫೆಕ್ಟ್ ಎಂದು ಐಎಂಡಿ (ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್ಮೆಂಟ್) ಹೇಳಿದ್ದು, ದಿನಾಂಕ: 2.5.2024ರಂದು 43.03 ಡಿಗ್ರಿ ಸೆಲ್ಷಿಯಸ್ ತಾಪಮಾನ ಜಿಲ್ಲೆಯಲ್ಲಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ತಾಪಮಾನದಿಂದಾಗಿ ವಾತಾವರಣದಲ್ಲಿ ಕುದಿ ಹೆಚ್ಚುತ್ತಿದ್ದು, ತಗಡಿನ ಶೆಡ್, ಟಿನ್ ಶೆಡ್‌ಗಳಲ್ಲಿ ಕ್ಷಣಕಾಲ ಕುಳಿತುಕೊಳ್ಳಲು ಪರಿತಪಿಸುವಂತಾಗಿದೆ. ಮನೆಯಲ್ಲಿ ಚಿಕ್ಕಮಕ್ಕಳು, ವಯೋವೃದ್ಧರು, ಬಾಣಂತಿಯರು ಹಾಗೂ ಗರ್ಭಿಣಿಯರು ಇನ್ನಿಲ್ಲದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಗರದ ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.
ಮೇ 5ರವರೆಗೆ ಬಿಸಿಗಾಳಿ
ಮೇ ೫ನೇ ತಾರೀಖಿನವರೆಗೂ ಬಿಸಿಗಾಳಿ, ಸೆಖೆ ಇರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಹೇಳಿದ್ದು, ಜನರು ಕುದಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸೆಖೆಯ ಆಘಾತ ಹಲವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಬೆಳಿಗ್ಗೆಯೇ ಆರಂಭಿಸಿ ಮಧ್ಯಾಹ್ನ 12ಗಂಟೆಯ ಒಳಗೆ ಮುಗಿಸುತ್ತಿರುವುದು ಕಂಡುಬರುತ್ತಿದೆ.