ನಮ್ಮ ಸಿಂಧನೂರು
ರಾಯಚೂರು, ಡಿಸೆಂಬರ್ 21
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಹಾಗೂ ಈ ಹಿಂದಿನಂತೆ ಮನರೇಗಾ ಯೋಜನೆಯನ್ನು ಮುಂದುವರಿಸುವಂತೆ ಒತ್ತಾಯಿಸಿ, ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ರಾಯಚೂರಿನ ಅಂಬೇಡ್ಕರ್ ಸರ್ಕಲ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ಮನವಿಪತ್ರ ರವಾನಿಸಲಾಯಿತು.
ಸಂಘ ಪರಿವಾರದ ರಾಜಕೀಯ ಕೈಗೊಂಬೆ ಬಿಜೆಪಿ, ದುಡಿಯುವ ಜನರ ಉದ್ಯೋಗ ಕಸಿದಿದೆ : ನಾಗರಾಜ ಪೂಜಾರ್
ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, “ಕೇಂದ್ರದ ಬಿಜೆಪಿ ಸರ್ಕಾರ ಎಂಎನ್‌ಪಿ(ನ್ಯಾಶನಲ್ ಮಾನಿಟೈಜೇಶನ್ ಪೈಪ್‌ಲೈನ್) ಮೂಲಕ ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳನ್ನು ಬಂಡವಾಳಿಗರಿಗೆ ಹರಾಜು ಹಾಕಿ ಜನರ ಸ್ವತ್ತನ್ನು ದೋಚಿದೆ. ಈಗ ದೇಶದ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸಿ, ವಿಬಿ-ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ. ಡಿಸೆಂಬರ್ 18 ರಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ಡಿಸೆಂಬರ್ 21ರ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಮಂಡಿಸುವ ಮೂಲಕ ಅನುಮೋದನೆ ನೀಡಿರುವುದು ದುಡಿಯುವ ಜನರಿಗೆ ಕರಾಳ ದಿನವಾಗಿದೆ. ಈ ಹಿಂದೆ ಇದ್ದ ರಾಜ್ಯಗಳಿಗೆ ವೆಚ್ಚದ ಹಂಚಿಕೆ ಕೇಂದ್ರದ ಶೇ.90, ರಾಜ್ಯದ ಶೇ.10ರ ಅನುಪಾತವನ್ನು ಬದಲಿಸಿ, ಶೇ.60:40 ನಿಗದಿಪಡಿಸಿದ್ದು, ಇದು ರಾಜ್ಯ ಸರಕಾರಗಳ ಮೇಲೆ ಹಣದ ಹೊರೆಯನ್ನು ಹೊರಿಸುವುದಲ್ಲದೇ, ಕೇಂದ್ರದ ಸರ್ವಾಧಿಕಾರ ನೀತಿಗೆ ಸಾಕ್ಷಿಯಾಗಿದೆ. ಸಂಘಪರಿವಾರದ ಮನಸ್ಥಿತಿಯ ಬಿಜೆಪಿ ಕೇವಲ ಹೆಸರನ್ನಷ್ಟೇ ಅಲ್ಲ, ಇಡೀ ಯೋಜನೆಯನ್ನೇ ನಾಮಾವಶೇಷ ಮಾಡಲು ಹೊರಟಿದೆ” ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಬಡವರ ಮೇಲೆ ಬಹಿರಂಗ ದಾಳಿ ನಡೆಸಿದೆ: ಅಜೀಜ್ ಜಾಗೀರದಾರ
ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಮಾತನಾಡಿ, ಕೂಲಿಕಾರ್ಮಿಕರು ಬಹುಕಾಲ ಹೋರಾಡಿ ಗೆದ್ದು ಪಡೆದುಕೊಂಡಿರುವ ಕಾನೂನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಾಗಿದೆ. ಅದರಲ್ಲಿ ಸುಧಾರಣೆ ತರುತ್ತೇವೆ ಎಂದು ಸುಳ್ಳು ಭರವಸೆ ನೀಡಿ, ಯೋಜನೆಯ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಬಡವರ ಮೇಲೆ ಬಹಿರಂಗವಾಗಿ ದಾಳಿ ನಡೆಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎಚ್ ಕಲಮಂಗಿ, ಶ್ರೀ ನಿವಾಸ ಬುಕ್ಕನಟ್ಟಿ, ಪಂಪಾಪತಿ, ಬೇಳಗುರ್ಕಿ, ಹುಸೇನಪ್ಪ ಅರಳಹಳ್ಳಿ, ನಿಸಾರ್ ಅಹ್ಮದ್, ಜಗದೀಶ್, ಜಲಾಲ್ ಪಾಷಾ, ಹನುಮಂತರಾಯ, ಯಲ್ಲಪ್ಪ, ಹನೀಫ್ ಅಬಕಾರಿ, ಮಹೇಶ್ ನಾಯಕ್, ಜಿಲಾನಿ ಯರಗೇರಾ ಸೇರಿದಂತೆ ಇನ್ನಿತರರಿದ್ದರು.

ಹಕ್ಕೊತ್ತಾಯಗಳು:- ದೇಶದ ಬಡ ಮಧ್ಯಮ ವರ್ಗದವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜಗಾರ್ ಎಂಡ್ ಅಜೀವಿಕಾ ಮಿಶನ್ (ಗ್ರಾಮೀಣ್) ಮಸೂದೆ -2025 (ವಿಬಿ-ಜಿ ರಾಮ್ ಜಿ)ಯನ್ನು ಕೂಡಲೇ ವಾಪಸ್ ಪಡೆಯಬೇಕು, ಮಹಾತ್ಮಗಾಂಧಿಯವರ ಹೆಸರನ್ನು ಬದಲಿಸಿ ದುರುದ್ದೇಶದಿಂದ ಸಂಘ ಪರಿವಾರದ ಮನಸ್ಥಿತಿಯಿಂದ ಬಿಜೆಪಿ ಸರ್ಕಾರ ಮಸೂದೆಯ ಹೆಸರನ್ನು ಬದಲಿಸಿದ್ದು ಕೂಡಲೇ ಈ ನಿರ್ಧಾರವನ್ನು ವಾಪಸ್ಸು ಪಡೆದು, ಮೊದಲಿನ ಹೆಸರಿನಲ್ಲಿಯೇ ಯೋಜನೆ ಮುಂದುವರಿಸಬೇಕು, 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೂ.86,000 ಕೋಟಿ ಹಣವನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ನಿಗದಿಪಡಿಸಿದ್ದು, ಮುಂಬರುವ 2026-27ನೇ ಸಾಲಿನ ಬಜೆಟ್‌ನಲ್ಲಿ 2 ಲಕ್ಷ ಕೋಟಿ ರೂಪಾಯಿ ಹಣವನ್ನು ಈ ಯೋಜನೆಗೆ ನಿಗದಿಪಡಿಸಬೇಕು ಎಂಬ ಹಕ್ಕೊತ್ತಾಯಗಳ ಮನವಿಯನ್ನು ರಾಷ್ಟ್ರಪತಿಯವರಿಗೆ ರವಾನಿಸಲಾಯಿತು.

