ನಮ್ಮ ಸಿಂಧನೂರು, ಜುಲೈ 18
ಟಿಯುಸಿಐ ಸಂಯೋಜಿತ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಗುತ್ತಿಗೆ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಿಸಿ ಘೋಷಿಸಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಎಂ.ಡಿ.ಅಮೀರ್ ಅಲಿ ಹಾಗೂ ಉಪಾಧ್ಯಕ್ಷ ಎಂ.ಗಂಗಾಧರ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು, ದಿನಾಂಕ: 16-7-2024 ರಂದು ರಾಜ್ಯ ಸರ್ಕಾರವು 30 ಜಿಲ್ಲೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ (ಸಿಎಚ್ಒ) ಶೇ.5 ರಷ್ಟು ವಾರ್ಷಿಕ ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಇದು 6,200 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.
‘ನೌಕರರ ಒಗ್ಗಟ್ಟಿನ ಮುಷ್ಕರಕ್ಕೆ ಸಂದ ಗೆಲುವು’
“ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಮತ್ತು ಹಿರಿಯ ವಕೀಲ ಎಸ್.ಬಾಲನ್, ಅಜೀಜ್ ಜಹಗೀರದಾರ್, ಎಂ.ನಿಸರ್ಗ ಮತ್ತು ಒಕ್ಕೂಟದ ರಾಜ್ಯ ಅಧ್ಯಕ್ಷ ಮಮಿತ್ ಗಾಯಕವಾಡ, ಜಿ.ಎಸ್.ಚನ್ನಪ್ಪ, ಮಲ್ಲಿಕಾರ್ಜುನ ನೂಲ್ಕರ್ ಸೇರಿದಂತೆ ಇತರರ ನೇತೃತ್ವದಲ್ಲಿ, ನೌಕರರಿಗೆ ಶೇ.೫ ರಷ್ಟು ವಾರ್ಷಿಕ ವೇತನ ಹೆಚ್ಚಳ, ಲಾಯಲ್ಟಿ ಬೋನಸ್ ಪಾವತಿಸುವುದು ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳ ನಿಲ್ಲಿಸುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಫೆಬ್ರವರಿ 19-22, 2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾಲ್ಕು ದಿನಗಳ ಕಾಲ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ” ಎಂದು ಅವರು ಹೇಳಿದ್ದಾರೆ.
“ಪ್ರೀಡಂ ಪಾರ್ಕ್ನಲ್ಲಿ ನಡೆದ ಮುಷ್ಕರದ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಎನ್ ಹೆಚ್ಎಮ್ನ ಡಿಡಿ ಸುರೇಶ್ ಶಾಸ್ತ್ರಿ ಭೇಟಿ ನೀಡಿದ್ದರು.ಆ ಸಂದರ್ಭದಲ್ಲಿ ಒಕ್ಕೂಟದ ಮುಖಂಡರೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಿ ಸಕಾರಾತ್ಮಕವಾಗಿ ಸ್ಪಂದಿಸಿ, ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದ್ದರು” ಎಂದು ಅವರು ತಿಳಿಸಿದ್ದಾರೆ.