ನಮ್ಮ ಸಿಂಧನೂರು, ಆಗಸ್ಟ್ 20
ಮೌಢ್ಯತೆ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವಿಜ್ಞಾನ ಅರಿವು ಬೆಳೆಸಲು ಪ್ರಯತ್ನಗಳಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ರಾಯಚೂರಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು, ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳೇ ನಾಳೆ ದೇಶವನ್ನು ಮುನ್ನಡೆಸುವವರು. ಹೀಗಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಪ್ರಾಯೋಗಿಕ ಕಲಿಕೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಟೆಲಿಸ್ಕೋಪ್ ನೀಡಲಾಗುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಬೆಳಗಬೇಕು. ದೇಶ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ವೃದ್ಧಿಯಾಗಬೇಕಾದರೆ ವಿಜ್ಞಾನದ ಮಾಹಿತಿಯಿದ್ದರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ್ ನಾಯಕ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ. ಶಾಂತಪ್ಪ ರುದ್ರಪ್ಪ ಅಂಗಡಿ, ಸೈಯದ್ ಹಫೀಜುಲ್ಲಾ ಸೇರಿದಂತೆ ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.