ನಮ್ಮ ಸಿಂಧನೂರು, ಮಾರ್ಚ್ 25
ನಗರದ ಗಾಂಧಿ ಸರ್ಕಲ್‌ನಲ್ಲಿ ಟ್ರಾಫಿಕ್ ಪ್ರದೇಶದಲ್ಲಿ ವಾಹನ ಸವಾರರಿಗೆ ನೆರಳಿನ ಸೌಕರ್ಯ ಕಲ್ಪಿಸಬೇಕೆಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಅಮೀನ್‌ಸಾಬ್ ನದಾಫ್ ನಗರಸಭೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಸೋಮವಾರ ಮನವಿ ಮಾಡಿರುವ ಅವರು, ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರು ಅಂದಾಜು 40 ಡಿಗ್ರಿ ಸೆಲ್ಸಿಯಸ್ ಆಸುಪಾಸು ಉಷ್ಣಾಂಶ ಇರುತ್ತದೆ. ಇಂತಹ ಸಮಯದಲ್ಲಿ ಗಾಂಧಿ ಸರ್ಕಲ್‌ನ ಸಿಗ್ನಲ್ ಪ್ರದೇಶದಲ್ಲಿ, ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕೆಲವೊತ್ತು ಉರಿಬಿಸಿಲಿನಲ್ಲೇ ನಿಲ್ಲಬೇಕಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಸನ್‌ಟ್ರೋಕ್ ಅಥವಾ ಇನ್ನಿತರೆ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಇದ್ದು, ಕೂಡಲೇ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಬೇರೆ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದು, ಸಿಂಧನೂರು ನಗರದಲ್ಲಿ ಈ ಕುರಿತು ನಿರ್ಲಕ್ಷö್ಯ ವಹಿಸದೇ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ. ಸಿಂಧೂರು ನಗರ ರಾಯಚೂರು ಜಿಲ್ಲೆಯಲ್ಲೇ ವಾಣಿಜ್ಯ ಪ್ರದೇಶವಾಗಿದ್ದು, ಗಾಂಧಿಸರ್ಕಲ್ ಅತ್ಯಂತ ಜನ ನಿಬಿಡ ಹಾಗೂ ವಾಹನ ದಟ್ಟಣೆ ಪ್ರದೇಶವಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳೂ ಉರಿಬಿಸಿಲಿನಿಂದ ಸಮಸ್ಯೆಗೆ ಈಡಾಗುತ್ತಿದ್ದಾರೆ. ಹಾಗಾಗಿ ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಿಬ್ಬಂದಿಗೂ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ನದಾಫ್ ಆಗ್ರಹಿಸಿದ್ದಾರೆ. ಅಲ್ಲದೇ ಈ ಕುರಿತು ನಗರಸಭೆಯ ವ್ಯವಸ್ಥಾಪಕರಾದ ಸುರೇಖಾ ಅವರಿಗೆ ಸೋಮವಾರ ಅಮೀನ್ ಸಾಬ್ ನದಾಫ್ ಅವರು ಮನವಿಪತ್ರ ಸಲ್ಲಿಸಿದರು.