ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 17
ಸಿಂಧನೂರು ನೂತನ ಜಿಲ್ಲೆ ರಚನೆ ಕುರಿತಂತೆ ಮುಂದಿನ ಹೋರಾಟ ರೂಪಿಸುವುದು ಮತ್ತು ವಿವಿಧ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 18-01-2026 ಭಾನುವಾರದಂದು ಬೆಳಿಗ್ಗೆ 10.30 ಗಂಟೆಗೆ ವಿವಿಧ ಸಂಘ-ಸಂಸ್ಥೆಗಳ, ವಿವಿಧ ವಲಯಗಳ ಮುಖಂಡರು, ಕಾರ್ಯಕರ್ತರ ಹಾಗೂ ಸಾರ್ವಜನಿಕರ ಪೂರ್ವಭಾವಿ ಸಭೆ ಕರೆಯಲಾಗಿದೆ.
‘ಸಿಂಧನೂರು ತಾಲೂಕನ್ನು ಜಿಲ್ಲೆಯನ್ನಾಗಿಸಿ, ಘೋಷಿಸಲು ವಿವಿಧ ಹೋರಾಟ ಸಮಿತಿಗಳು ಮತ್ತು ವರದಿ ಸಿದ್ಧತಾ ಸಮಿತಿಗಳನ್ನು ರಚಿಸುವ ಕುರಿತಂತೆ ಕರೆದಿರುವ ಸಾರ್ವಜನಿಕರ ಪೂರ್ವಭಾವಿ ಸಭೆ’ಯಲ್ಲಿ ಭಾಗವಹಿಸುವಂತೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ವಿವಿಧ ವಲಯಗಳ ಮುಖಂಡರು, ಕಾರ್ಯಕರ್ತರು ಹಾಗೂ ಗಣ್ಯರಿಗೆ ಪತ್ರ ನೀಡಿ ಮನವಿ ಮಾಡಿಕೊಂಡಿರುವುದು ತಿಳಿದುಬಂದಿದೆ.
ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪ
“ಪತ್ರಕರ್ತರೊಂದಿಗೆ ಸಂವಾದ ಹಾಗೂ ಎಲ್ಲಾ ಧರ್ಮದ ಮಠಾಧೀಶರು ಹರ-ಗುರು-ಚರಮೂರ್ತಿಗಳ ಸಮುಖದಲ್ಲಿ ಚರ್ಚಾಗೋಷ್ಠಿಯನ್ನು ಮಾಡಿದ್ದು, ವಿಧಾನಪರಿಷತ್ ಸದಸ್ಯರಾದ ನಂತರ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿ, ಬೆಂಗಳೂರು ವಿಧಾನಪರಿಷತ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿಗೆ ಸಿಂಧನೂರು ಜಿಲ್ಲೆಯನ್ನಾಗಿಸಲು ಸಂಬಂಧಪಟ್ಟ ಸಚಿವರಿಗೆ ಮನವಿಯನ್ನು ಮಾಡಲಾಗಿದ್ದು, ಕಳೆದ ತಿಂಗಳು ಡಿಸೆಂಬರ್ 15ರಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಿಂಧನೂರು ಜಿಲ್ಲೆಯನ್ನಾಗಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ನಂತರ ಸರ್ಕಾರದ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರು ಕಲಬುರ್ಗಿ ಇವರಿಗೆ ಸಮಗ್ರ ವರದಿಯನ್ನು ಸಲ್ಲಿಸಲು ಸರ್ಕಾರವು ಸೂಚಿಸಿರುತ್ತದೆ. ತಾವು ಪ್ರಾದೇಶಿಕ ಆಯುಕ್ತರು ಕಲಬುರ್ಗಿ ಇವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಪತ್ರ ರವಾನಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ” ಎಂದು ಬಸನಗೌಡ ಬಾದರ್ಲಿ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
‘ನಮ್ಮ ಸಿಂಧನೂರು ಜಿಲ್ಲೆಯಾಗಲಿ’
“ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ವಿವಿಧ ಮುಖಂಡರುಗಳು ಸಿಂಧನೂರು ಜಿಲ್ಲೆಯನ್ನಾಗಿಸಲು ಹೋರಾಟದ ರೂಪುರೇಷಗಳನ್ನು ಮಾಡಿದ್ದು ನಿಜವಿರುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನವಸಂಕಲ್ಪ ನವ ಸಿಂಧನೂರು ಪಾದಯಾತ್ರೆಯ ಮೂಲಕ ತಾಲೂಕಿನ ಎಲ್ಲಾ ಗ್ರಾಮಗಳಿಗೆ ವಿಚಾರ ವಿನಿಮಯ ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು, ಶ್ರೀಗಳು, ಚಿಂತಕರು, ಬುದ್ದಿಜೀವಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು, ವರ್ತಕರು, ವಿವಿಧ ವ್ಯಾಪಾರಿಗಳು, ಸಂಘಸಂಸ್ಥೆಯ ಪ್ರತಿನಿಧಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಸಾಹಿತ್ಯ ಪರಿಷತ್ತುಗಳು, ವಕೀಲರು, ವೈದ್ಯರು, ರೈತ ಮುಖಂಡರು, ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು, ಮಹಿಳಾ ಸಂಘ ಸಂಸ್ಥೆಗಳು, ಪತ್ರಕರ್ತರು, ದಲಿತಪರ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು, ನಿವೃತ್ತ ನೌಕರರು, ವಿವಿಧ ಕೈಗಾರಿಕಾ ಮಿಲ್ ಮಾಲಕರು, ಎಲ್ಲಾ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖಂಡರುಗಳು, ಎಲ್ಲಾ ಪಕ್ಷಗಳ ಮುಖಂಡರು, ವಿದ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರು, ಸರ್ವಧರ್ಮೀಯ ಸಾರ್ವಜನಿಕ ಮಹನೀಯರು ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸಲು ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ತಿಳಿಸುವುದರ ಮುಖಾಂತರವಾಗಿ ಸಿಂಧನೂರನ್ನು ಜಿಲ್ಲೆಯನ್ನಾಗಿಲು ಒಕ್ಕೊರಲ ಒಗ್ಗಟ್ಟಿನ ಕೂಗು ನಮ್ಮದಾಗಲಿ, ನಮ್ಮ ಸಿಂಧನೂರು ಜಿಲ್ಲೆಯಾಗಲಿ” ಎಂದು ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಅವರು ಪ್ರಸ್ತಾಪಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

