(ಸಿಟಿ ಸುದ್ದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 20
ನಗರದ ಹಟ್ಟಿ ವಿರುಪಾಪುರ ರಸ್ತೆ ಬದಿ ಇರುವ ಜೆಸ್ಕಾಂನ ವಿದ್ಯುತ್ ಕಂಬಗಳು ಬಾಗಿದ್ದು, ನೆಲಕ್ಕೆ ಉರುಳಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಾರ್ಡ್‌ನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಟೇಲ್ ಕಾಲೋನಿ, ಪಟೇಲ್ ಲೆಔಟ್ ವ್ಯಾಪ್ತಿಯ ರಸ್ತೆ ಬದಿಯಲ್ಲಿರುವ ಈ ವಿದ್ಯುತ್ ಕಂಬಗಳು ಕಳೆದ ಹಲವು ದಿನಗಳಿಂದ ಒಂದೆಡೆ ವಾಲಿದ್ದು, ಜೋರು ಗಾಳಿ ಬೀಸಿದರೆ ನೆಲಕ್ಕೆ ಬೀಳಲಿವೆ. ಈ ಮಾರ್ಗದಲ್ಲಿ ವಾಹನ ಸವಾರರು ಹಾಗೂ ಜನರು ಹೆಚ್ಚು ಸಂಚರಿಸುವುದರಿಂದ ಯಾವುದೇ ರೀತಿಯ ಅಪಾಯ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ರಸ್ತೆ ಪಕ್ಕದ ಇನ್ನೊಂದು ಬದಿಯಲ್ಲಿ ಕಂಬಗಳನ್ನು ಅಳವಡಿಸಿದ್ದು, ಈ ಕಂಬಗಳಿಗೆ ವಾಲಿದ ಕಂಬಗಳ ವಿದ್ಯುತ್ ತಂತಿಯನ್ನು ತೆರವುಗೊಳಿಸಿ ಅಳವಡಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಆದರೆ ಬಹಳಷ್ಟು ದಿನಗಳಿಂದ ವಾಲಿದ ಕಂಬಗಳ ಹಾಗೆಯೇ ಇದ್ದು, ದುರಸ್ತಿಗೆ ಜೆಸ್ಕಾಂ ಮುಂದಾಗಿಲ್ಲ. ರಸ್ತೆ ಬದಿ ಹೊಲಗಳಿದ್ದು ಕೃಷಿ ಚಟುವಟಿಕೆ ಕೈಗೊಳ್ಳಲೂ ರೈತರು ಭಯಗೊಂಡಿದ್ದಾರೆ, ಯಾವುದೇ ರೀತಿಯ ಅನಾಹುತ ಸಂಭವಿಸುವ ಮುಂಚೆ ಜೆಸ್ಕಾಂನವರು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.