ಸಿಂಧನೂರು ಜಿಲ್ಲಾ ರಚನೆಗೆ ಹೋರಾಟ ರೂಪಿಸಲು ಜ.8ರಂದು ಪಕ್ಷಾತೀತ ಬೃಹತ್ ಸಭೆ: ಡಾ.ಬಿ.ಎನ್.ಪಾಟೀಲ್

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 5

ಸಿಂಧನೂರು ಜಿಲ್ಲೆ ರಚನೆ ಕುರಿತಂತೆ ಹೋರಾಟ ರೂಪಿಸಲು 08-01-2026ರಂದು ನಗರದ ಟೌನ್‌ಹಾಲ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪಕ್ಷಾತೀಯ ಸಭೆಯನ್ನು ಕರೆಯಲಾಗಿದೆ ಎಂದು ಡಾ.ಬಿ.ಎನ್.ಪಾಟೀಲ್ ತಿಳಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿಂಧನೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಕೇಂದ್ರ ಸ್ಥಾನದಲ್ಲಿದ್ದು, ಸಾರಿಗೆ-ಸಂಪರ್ಕ-ಸಂವಹನಕ್ಕೆ ಬಹಳಷ್ಟು ಅನುಕೂಲತೆಯನ್ನು ಹೊಂದಿದೆ. ಸಿಂಧನೂರು, ಲಿಂಗಸುಗೂರು, ಮಸ್ಕಿ ಸೇರಿದಂತೆ ಇತರೆ ಸಮೀಪದ ತಾಲೂಕುಗಳನ್ನು ಒಳಗೊಂಡು ಜಿಲ್ಲೆ ರಚಿಸಿದರೆ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳು ಸುಗಮವಾಗಲಿವೆ. ಈ ನಿಟ್ಟಿನಲ್ಲಿ ಲಿಂಗಸುಗೂರು, ಮಸ್ಕಿ ಸೇರಿದಂತೆ ಇನ್ನಿತರೆ ತಾಲೂಕು ಹಾಗೂ ಪಟ್ಟಣ ಪ್ರದೇಶದವರಿಗೆ ಸಿಂಧನೂರು ಜಿಲ್ಲಾ ಕೇಂದ್ರವಾದರೆ ಜನಸಾಮಾನ್ಯರು ಸೇರಿದಂತೆ ಆಡಳಿತಕ್ಕೆ ಏನೆಲ್ಲಾ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ” ಎಂದು ಹೇಳಿದರು
ಜನಾಭಿಪ್ರಾಯ ಸಂಗ್ರಹ, ರೂಪುರೇಷೆ ತಯಾರು
ಪಕ್ಷಾತೀತ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಅಂದು ಕರೆದಿರುವ ಬೃಹತ್ ಸಭೆಯಲ್ಲಿ ಎಲ್ಲ ಸಂಘ-ಸಂಸ್ಥೆಗಳವರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಯುವ ಮುಖಂಡರು, ರಾಜಕೀಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಯುವಜನರು, ಮಹಿಳೆಯರು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು ಎಂದ ಬಿ.ಎನ್.ಪಾಟೀಲ್ ಅವರು ಜನಾಭಿಪ್ರಾಯದ ಸಂಗ್ರಹದ ಮೂಲಕ ಜಿಲ್ಲಾ ರಚನೆ ಹೋರಾಟದ ಕುರಿತು ರೂಪು-ರೇಷೆ ತಯಾರಿಸಲಾಗುವುದು. ಅಂದು ಹೋರಾಟ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
‘ಕಾರಟಗಿ, ತಾವರಗೇರಾ ಸಂಪರ್ಕ’
“ಸಿಂಧನೂರು ನಗರಕ್ಕೆ ತಾವರಗೇರಾ, ಕಾರಟಗಿ ಪಟ್ಟಣಗಳು ಸಮೀಪದಲ್ಲಿವೆ. ಅವರನ್ನೂ ಕೂಡ ಜಿಲ್ಲಾ ರಚನೆಗೆ ಕುರಿತಂತೆ ಸಂಪರ್ಕಿಸಬಹುದಾಗಿದೆ. ಕಾರಟಗಿ ಮತ್ತು ತಾವರಗೇರಾ ಪಟ್ಟಣ ಅತ್ಯಂತ ಸಮೀಪದಲ್ಲಿರುವುದರಿಂದ ಅವರೂ ಸಹ ಸಿಂಧನೂರು ಜಿಲ್ಲೆ ರಚನೆಗೆ ಕುರಿತಂತೆ ಕೈಜೋಡಿಸುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳವರು, ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳು, ಜನಪರ ಸಂಘಟನೆಗಳು, ವೃತ್ತಿಪರ ಸಂಘಟನೆಗಳು ಜವಾಬ್ದಾರಿಯನ್ನು ವಹಿಸಿಕೊಂಡು ಜಿಲ್ಲಾ ರಚನೆಗೆ ಶ್ರಮಿಸಬೇಕಿದೆ” ಎಂದು ಪಾಟೀಲ್ ಮನವಿ ಮಾಡಿದರು.
‘ಜಿಲ್ಲಾ ಮಟ್ಟದ ಕಚೇರಿಗಳ ಸ್ಥಾಪನೆಗೆ ಹಂಪನಗೌಡರ ಪ್ರಯತ್ನ’
“ಶಾಸಕ ಹಂಪನಗೌಡ ಬಾದರ್ಲಿ ಅವರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಜಿಲ್ಲಾ ಕೋರ್ಟ್, ಸುಡಾ ಕಚೇರಿ, ಜಿಲ್ಲಾ ಆಸ್ಪತ್ರೆ ಸೇರಿದಂತೆ ಹಲವು ಕಚೇರಿಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಆರ್‌ಟಿಒ ಕಚೇರಿ ಸೇರಿದಂತೆ ಇನ್ನಿತರೆ ಕಾರ್ಯಾಲಯಗಳು ಆರಂಭಗೊಳ್ಳಲಿವೆ. ಜಿಲ್ಲಾ ಕೇಂದ್ರವಾಗಬೇಕಾದ 130 ರಿಂದ 140 ಜಿಲ್ಲಾ ಕಚೇರಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಾಸಕರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ” ಎಂದು ಬಿ.ಎನ್.ಪಾಟೀಲ್ ವಿವರಿಸಿದರು.
ಈ ಸಂದರ್ಭದಲ್ಲಿ ಸುಡಾ ಸದಸ್ಯ ವೈ.ನರೇಂದ್ರನಾಥ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್‌ಸಾಬ್, ಎಚ್.ಎಫ್.ಮಸ್ಕಿ, ದಾವಲ್‌ಸಾಬ್ ದೊಡ್ಮನಿ ಸೇರಿದಂತೆ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *