ಸಿಂಧನೂರು: ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಘಟನೆ, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ

Spread the love

ನಮ್ಮ ಸಿಂಧನೂರು, ಏಪ್ರಿಲ್ 20
ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕೊಲೆಮಾಡಿದ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಡಿ.ಎಚ್.ಕಂಬಳಿ ಆಗ್ರಹಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ನೇಹಾ ಕೊಲೆ ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ, ಈ ಪೈಶಾಚಿಕ ಘಟನೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದು ಹೇಳಿದ ಅವರು, ಈ ಪ್ರಕರಣವನ್ನು ಜಾತಿ, ಧರ್ಮ ಹಾಗೂ ರಾಜಕೀಯಗೊಳಿಸದೇ ತಪ್ಪಿತಸ್ಥನಿಗೆ ಉಗ್ರ ಶಿಕ್ಷೆ ನೀಡಬೇಕು. ಇಂತಹ ದುಷ್ಕೃತ್ಯಗಳು ಸಮಾಜದಲ್ಲಿ ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು. ಆ ಮೂಲಕ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳು ಹಾಗೂ ಭದ್ರತಾ ಭಾವವನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬ ಸಂಚಾಲಕರಾದ ಚಂದ್ರಶೇಖರ ಗೊರಬಾಳ ಮಾತನಾಡಿ, ನಿರ್ಭಯಾ ಘಟನೆಯಾದ ನಂತರ ನಿರ್ಭಯಾ ಕಾಯ್ದೆ ೨೦೧೩ ಜಾರಿಗೆ ಬಂದಿದ್ದು, ಈ ಕಾಯ್ದೆಯಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಆದರೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವಾಗುತ್ತಿಲ್ಲ. ಪೊಲೀಸ್ ಇಲಾಖೆ ಇಂತಹ ಅಪರಾಧಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮಕ್ಕೆ ಮುಂದಾಗಬೇಕು. ವಿದ್ಯಾರ್ಥಿನಿ ನೇಹಾ ಸಾವಿನ ಘಟನೆಯಲ್ಲಿ ರಾಜ್ಯ ಸರ್ಕಾರ ಮಾನವೀಯ ಸ್ಪಂದನೆ ನೀಡಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಸೌಜನ್ಯ ಕೊಲೆ ಪ್ರಕರಣದಲ್ಲಿ ಈ ಹಿಂದಿನ ಆರೋಪಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿದೆ. ದೋಷಿಗಳು ಯಾರು ಎನ್ನುವ ಬಗ್ಗೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಆ ಬಗ್ಗೆ ತನಿಖೆ ನಡೆದಿಲ್ಲ. ಸರ್ಕಾರ ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಹಕ್ಕು ಹಾಗೂ ಭದ್ರತೆ ಒದಗಿಸಬೇಕಿರುವುದು ಜಬಾವ್ದಾರಿಯಾಗಿದೆ ಎಂದು ಹೇಳಿದರು.
ಒಕ್ಕೂಟದ ಸಂಚಾಲಕ ದೇವೇಂದ್ರಗೌಡ ಮಾತನಾಡಿ, ಇಂತಹ ದುಷ್ಕೃತ್ಯ ನಡೆಸಿದವರ ಮೇಲೆ ಅತ್ಯಂತ ಶೀಘ್ರವಾಗಿ ಶಿಕ್ಷೆ ವಿಧಿಸುವ ದೃಷ್ಟಿಯಿಂದ ಸರ್ಕಾರ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಗಳ ವ್ಯವಸ್ಥೆ ಕಲ್ಪಿಸಬೇಕು. ಆ ಮೂಲಕ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯಕ್ಕೊಳಗಾದವರಿಗೆ ವಿಳಂಬವಾಗದಂತೆ ನ್ಯಾಯಕೊಡಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೋಪಾಲಕೃಷ್ಣ, ಬಿ.ಎನ್.ಯರದಿಹಾಳ, ಬಸವರಾಜ ಬೆಳಗುರ್ಕಿ ಇದ್ದರು.


Spread the love

Leave a Reply

Your email address will not be published. Required fields are marked *