ನಮ್ಮ ಸಿಂಧನೂರು, ಏಪ್ರಿಲ್ 20
ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್ ಆವರಣದಲ್ಲಿಯೇ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರವಾಗಿ ಕೊಲೆಗೀಡಾದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದು, ಈ ದುಷ್ಕೃತ್ಯವೆಸಗಿದ ತಪ್ಪಿತಸ್ಥನಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಹಾಗೂ ಬೇಡ ಜಂಗಮ ಸಮಾಜ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿತು. ಇಂತಹ ಘಟನೆಯಿಂದ ಸಮಾಜದಲ್ಲಿ ಹೆಣ್ಣುಮಕ್ಕಳು ಓಡಾಡುವುದು ತುಂಬಾ ಕಷ್ಟವಾಗಿರುತ್ತದೆ. ದುಃಖದ ಸಂದರ್ಭದಲ್ಲಿ ರಾಜ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ವೈಯಕ್ತಿಕ ಕಾರಣಕ್ಕಾಗಿ ಕೊಲೆಯಾಗಿದೆ ಎಂದು ಹೇಳಿಕೆ ನೀಡಿರುವುದು ನಮ್ಮ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಹಾಗೂ ಬೇಡ ಜಂಗಮ ಸಮಾಜದ ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮಾಜ ಬಾಂಧವರು ಇದ್ದರು.