(ಜೀವ ಪರಿಸರ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 27
ತಾಲೂಕು ವ್ಯಾಪ್ತಿ ಸೇರಿದಂತೆ ಗಡಿ ಗ್ರಾಮಗಳಲ್ಲಿ ಬೇವಿನ ಮರಗಳು ಹೂಮುಡಿದು ನಿಂತಿವೆ. ಕೊರೊನಾ ನಂತರ ಬಹಳಷ್ಟು ಬೇವಿನ ಮರಗಳು ಸಂಪೂರ್ಣ ಒಣಗಿ ಬೋಳು ಬೋಳು ಕಾಣಿಸುತ್ತಿದ್ದವು. ತದನಂತರದ ಎರಡು ವರ್ಷಗಳಲ್ಲಿ ಈ ಮರಳು ಚೇತರಿಸಿಕೊಂಡಿದ್ದು, ಬೇಸಿಗೆಯ ಬಿಸಿಲಿಲ್ಲ ನೆರಳ ಸಿಂಚನ ಮಾಡುತ್ತಿವೆ. ಬೇವಿನ ಮರದ ಬಳಿ ಹೋದರೆ ಅದರಿಂದ ಹೊರ ಸೂಸುವ ಸುವಾಸನೆ ಮನಸೋಲದವರಿಲ್ಲ.
ಮಸ್ಕಿ ತಾಲೂಕಿನ ಹಸಮಕಲ್, ದೀನಸಮುದ್ರ, ಗುಡದೂರು, ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹಸಿರುವೊದ್ದು ನಿಂತ ಬೇವಿನಮರಗಳ ವನಪು-ವಯ್ಯಾರವನ್ನು ನೋಡುವುದೇ ಒಂದು ಚೆಂದ. ತಾಲೂಕಿನ ನೀರಾವರಿ ಆಶ್ರಿತ ಗ್ರಾಮಗಳಲ್ಲಿಯೂ ಮಳೆಯಲ್ಲಿ ನೀರುಂಡು, ವರ್ಷವಿಡೀ ನೆರಳ ಹಂಚುವ ಬೇವಿನಮರಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಯುಗಾದಿಯ ಬೇವು
ಇನ್ನು ಯುಗಾದಿ ಎಂದರೆ ಬೇವು-ಬೆಲ್ಲ. ಬೇವು ತಯಾರಿಸಲು ಬೇವಿನ ಎಲೆ, ಅದರ ಹೂ ಬಳಸುವುದು ವಾಡಿಕೆಯಾಗಿದೆ. ಹಬ್ಬದ ಸಂದರ್ಭದಲ್ಲಿ ಬೇವಿನ ಮರಗಳು ಮೈತುಂಬ ಹಸಿರ ಸಿರಿಯನ್ನು ಮೈತಳೆದುಕೊಂಡಿರುವುದು ಬರಗಾಲದಲ್ಲೂ ಆಶಾಕಿರಣ ಮೂಡಿದಂತಾಗಿದೆ. ಬದುಕಿನಲ್ಲಿ ಏನೆಲ್ಲಾ ಕಷ್ಟಗಳು ಎದುರಾದರೂ ಹೇಗೆ ಎದ್ದು ನಿಲ್ಲಬೇಕೆಂಬ ಪ್ರತಿಮೆಯಂತೆ ‘ಬೇವಿನ ಮರಗಳು’ 40 ಡಿಗ್ರಿ ಉಷ್ಣಾಂಶದಲ್ಲಿಯೂ ಹಚ್ಚ ಹಸಿರಿನ ಮೂಲಕ ನೆರಳ ದಾಸೋಹ ಬಡಿಸುತ್ತಿರುವುದು ಪ್ರಕೃತಿಯ ಸೋಜಿಗವಲ್ಲವೇ ?