ನಮ್ಮ ಸಿಂಧನೂರು, ಜನವರಿ 26
ನಗರದ ಆದರ್ಶ ಕಾಲೋನಿಯ ಸಹನಾ ಆಸ್ಪತ್ರೆಯ ಹತ್ತಿರದ ಎಲ್.ಬಿ.ಕೆ.ಕಾಲೇಜು ಬಳಿಯಿರುವ ಕಾರ್ಯಾಲಯದಲ್ಲಿ ನಮ್ಮ ಸಿಂಧನೂರು ಡಿಜಿಟಲ್ ಮಾಧ್ಯಮವನ್ನು ಗಣರಾಜ್ಯೋತ್ಸವ ದಿನದಂದು ಹಿರಿಯ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್.ಕಂಬಳಿಯವರು ಸಂವಿಧಾನದ ಪೀಠಿಕೆಯ ಪ್ರತಿಕೃತಿ ಹೂಹಾರ ಹಾಕುವ ಮೂಲಕ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾಧ್ಯಮ ಲೋಕ ಮುದ್ರಣ ಮಾಧ್ಯಮದಿಂದ, ಡಿಜಿಟಲ್ ಮಾಧ್ಯಮಕ್ಕೆ ಹೊರಳುತ್ತಿದ್ದು, ಸ್ವತ್ರಂತ್ರ ಮಾಧ್ಯಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ಉಪನ್ಯಾಸಕರು ಹಾಗೂ ಚಿಂತಕರಾದ ಚಂದ್ರಶೇಖರ ಗೊರಬಾಳ ಅವರು ಮಾತನಾಡಿ, ಸೋಷಿಯಲ್ ಮೀಡಿಯಾ ಬಂದನಂತರ ಬಹಳಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಮಾಧ್ಯಮ ಕ್ಷೇತ್ರ ಹೊಸ ಹಾದಿಯತ್ತ ಸಾಗುತ್ತಿದೆ. ಜನಸಾಮಾನ್ಯರ ನೋವು-ಸಂಕಷ್ಟಗಳಿಗೆ ಧ್ವನಿಯಾಗಿ ಡಿಜಿಟಲ್ ಮೀಡಿಯಾ ಕೆಲಸ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು. ಮನುಜ ಮತಬಳಗದ ಬಸವರಾಜ ಬಾದರ್ಲಿ, ನಾಗರಾಜ್ ಪೂಜಾರ್ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿರುಪಾದಿ ಗೋಮರ್ಸಿ, ಲಿಂಗಾಧರ ಗುರುಸ್ವಾಮಿ, ಪರಶುರಾಮ ತಿಡಿಗೋಳ, ಗಂಗಪ್ಪ ದಿನ್ನಿ, ಚಾಂದಪಾಷಾ ಸೇರಿದಂತೆ ಡಿಜಿಟಲ್ ಮೀಡಿಯಾದ ಮಿಥುನ್ ಕುಮಾರ್, ಬಸವರಾಜ ಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.