ನಮ್ಮ ಸಿಂಧನೂರು, ಮೇ 3
ಬಿಸಿಲಿನ ಆಘಾತದಿಂದಾಗಿ ಮಸ್ಕಿ ಪಟ್ಟಣದಲ್ಲಿ ಮಲ್ಲಯ್ಯಸ್ವಾಮಿ (48) ಎಂಬುವವರು ಶುಕ್ರವಾರ ಮಧ್ಯಾಹ್ನ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ನಿವಾಸಿಯಾಗಿರುವ ಮಲ್ಲಯ್ಯಸ್ವಾಮಿ ಅವರು ಬಿಎಂಟಿಸಿ ನೌಕರರಾಗಿದ್ದಾರೆ. ಕೆಲಸದ ನಿಮಿತ್ತ ತಮ್ಮ ಸ್ವಗ್ರಾಹ ಹಸಮಕಲ್ ಗ್ರಾಮಕ್ಕೆ ಕಳೆದ ಎರಡು ದಿನಗಳ ಹಿಂದೆ ಬಂದಿದ್ದರು. ಕಾರ್ಯನಿಮಿತ್ತ ಅವರು ಮಸ್ಕಿ ಪಟ್ಟಣಕ್ಕೆ ಹೋಗಿದ್ದಾರೆ. ಕೆಲಸ ಮುಗಿಸಿಕೊಂಡು ವಾಪಸ್ ಬರಲು ಹಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಮಯದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.