ನಮ್ಮ ಸಿಂಧನೂರು, ಏಪ್ರಿಲ್ 2
ಕೆಲ ದಿನಗಳಿಂದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಹೈಕಮಾಂಡ್‌ನ ಮನವೊಲಿಕೆಯ ನಂತರ ಸುಮ್ಮನಾಗಿದ್ದು, ಕುಷ್ಟಗಿಯ ಬುತ್ತಿ ಬಸವೇಶ್ವರ ಸಭಾಭವನದಲ್ಲಿ ನಡೆದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬೂತ್ ವಿಜಯ ಅಭಿಯಾನದಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಪ್ರಚಾರಕ್ಕೆ ಮುಂದಾಗಿದ್ದು, ಹಲವು ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಏಕಾಏಕಿ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದ ಹಾಲಿ ಸಂಸದರು, ಮಾರ್ಚ್ ೨೧ರಂದು ಕೊಪ್ಪಳದಲ್ಲಿ ೮ ವಿಧಾನಸಭಾ ಕ್ಷೇತ್ರದ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳು ಆಯೋಜಿಸಿದ್ದ ಸಭೆಯಲ್ಲಿ ತಮ್ಮ ಮುನಿಸನ್ನು ವ್ಯಕ್ತಪಡಿಸುವ ಮೂಲಕ ಹೈಕಮಾಂಡ್‌ಗೆ ಸವಾಲೆಸೆದಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ಸಕ್ರಿಯ ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ ಬೆನ್ನಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆAದು ಹೇಳಲಾಗುತ್ತಿದೆ.

ಅನುಮಾನಕ್ಕೆ ತೆರೆ
ಬೆಂಬಗಲಿರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಸಂಗಣ್ಣ ಕರಡಿ ಅವರು ಬೇರೆ ದಾರಿ ತುಳಿಯಲಿದ್ದಾರೆ, ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಚರ್ಚೆಗೆ ಬಂದಿದ್ದವು. ಅಲ್ಲದೇ ಬಿಜೆಪಿ ಪ್ರಚಾರದಲ್ಲಿ ಅವರು ಭಾಗವಹಿಸುವ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖ ನಾಯಕರ ಮನವೊಲಿಕೆಯ ನಂತರ ಹಾಲಿ ಸಂಸದರು ತೀರ್ಮಾನ ಬದಲಿಸಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಧುಮುಕಿದ್ದಾರೆಂದು ತಿಳಿದುಬಂದಿದೆ.