ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 19
“ನಾವ್ ಮುಂಜಾಲೆದ್ದು ಚಾ ಕುಡ್ದು, ಉಣಲಾರದಂಗ ಮಸ್ಕಿ ತಹಸಿಲ್ ಆಫೀಸಿಗೆ ಬಂದ್ರ, ಅಧಿಕಾರಿಗುಳು ಬರೋದೇ ಲೇಟು ನೋಡ್ರಿ. ದಿನಾ ಕಾದು ಕಾದು ಸಾಕಾಗಿ ಹೋಗೈತಿ. ಈ ಮಸ್ಕಿ ತಹಸಿಲ್ ಆಫೀಸು ಅಂಬೋದು ಯಾವಾಗ ಶುದ್ಧ ಆಗುತ್ತೋ ಗೊತ್ತಿಲ್ಲ. ಯಾವ್ ಅಧಿಕಾರಿಗುಳು ಬಂದ್ರೂ ಇಷ್ಟೇನೆ ಟೈಮಿಲ್ಲ ಟೇಬಲ್ಲು ಇಲ್ಲ ಇವರಿಗೆ” ಪ್ರಮಾಣಪತ್ರವೊಂದನ್ನು ಪಡೆಯಲು ತಾಲೂಕಿನ ಗ್ರಾಮವೊಂದರಿಂದ ಬೆಳಿಗ್ಗೆಯೇ ಬಂದಿದ್ದ ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.
ಪ್ರತಿದಿನವೂ ಬೆಳಿಗ್ಗೆ 9.30ರ ಸುಮಾರು ಇಲ್ಲವೇ 10 ಗಂಟೆ ಮೇಲ್ಪಟ್ಟು ತಹಸಿಲ್ ಕಚೇರಿಯ ಪಡಸಾಲೆ ಸೇರಿದಂತೆ ಸಿಬ್ಬಂದಿಗಳ ಕೊಠಡಿಗಳ ಕಸ ಹೊಡೆಯಲು ಶುರುಮಾಡುತ್ತಾರೆ. ಅಷ್ಟೊತ್ತಿಗಾಗಲೇ ಕೆಲಸ ಕಾರ್ಯಗಳ ನಿಮಿತ್ತ ಬಂದವರನ್ನು ಕಸ ಹೊಡೆದಿಲ್ಲ ಇನ್ನು ತಡ್ಕಳ್ಳಿ ಅಂತಾರೆ. ಕೆಲ ಸಿಬ್ಬಂದಿ 10.30ರ ಮೇಲ್ಟಟ್ಟು ಆಪೀಸಿಗೆ ಕಾಲಿಟ್ಟರೇ ಇನ್ನೂ ಕೆಲವರು 11 ಗಂಟೆಗೆ ಬರುತ್ತಾರೆ. ತಹಸೀಲ್ ಕಾರ್ಯಾಲಯದ ಸಿಬ್ಬಂದಿಗೆ ಸರ್, ಆಫೀಸ್ ಟೈಮ್ ಏನಿದೆ, ಅಧಿಕಾರಿಗಳು ಇಷ್ಟೊತ್ತಿನವರೆಗೂ ಯಾಕೆ ಬಂದಿಲ್ಲ ಎಂದು ಕೇಳಿದರೆ ನಿಮಗೇ ಯಾಕೆ ಬೇಕು ಅಂತಾರೆ. ಇವರು ಆಡಿದ್ದೇ ಆಟ ಆಗಿದೆ. ಬಹುತೇಕ ಸಿಬ್ಬಂದಿಗೆ ಟೈಮ್ ಸೆನ್ಸ್ ಇಲ್ಲ, ನಿರ್ದೇಶನ ಮಾಡುವ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಅವರ ಹೆದರಿಕೆ ಇಲ್ಲದೇ ಇರುವುದೇ ಇವರ ಈ ವರ್ತನೆಗೆ ಕಾರಣ ಎಂದು ಕೆಲಸದ ನಿಮಿತ್ತ ತಹಸೀಲ್ ಕಾರ್ಯಾಲಯಕ್ಕೆ ಬಂದಿದ್ದ ಸಂಘಟನೆಯೊಂದರ ಯುವಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸಿಬ್ಬಂದಿ ಕಾಯುತ್ತ ಮಲಗಿದ ವ್ಯಕ್ತಿ
ಅನಾರೋಗ್ಯ ಪರಿಸ್ಥಿತಿಯಲ್ಲೂ ಅನಿವಾರ್ಯವಾಗಿ ಪ್ರಮಾಣಪತ್ರವೊಂದನ್ನು ಪಡೆಯಲು ಬಂದಿದ್ದ ಗ್ರಾಮವೊಂದರ ನಾಗರಿಕರೊಬ್ಬರು ತಹಸಿಲ್ ಕಾರ್ಯಾಲಯದ ಸಿಬ್ಬಂದಿ ಸರಿಯಾದ ವೇಳೆಗೆ ಬರದೇ ಇರುವುದರಿಂದ ಪ್ರಮಾಣಪತ್ರ ಪಡೆಯುವ ಕೌಂಟರ್ ಮುಂದೆಯೇ ಮಲಗಿದ್ದು ಶನಿವಾರ ಬೆಳಿಗ್ಗೆ 10 ಗಂಟೆಯ ಸುಮಾರು ಕಂಡುಬಂತು. ಮಲಗಿದ್ದ ವ್ಯಕ್ತಿ ಕೌಂಟರ್ ತೆರೆಯಿತೇ ಎಂದು ಆಗಾಗ ಪದೇ ಪದೆ ಎದ್ದು ನೋಡುತ್ತಿದ್ದುದು ತಹಸೀಲ್ ಕಾರ್ಯಾಲಯದ ಆಡಳಿತ ಹಳಿ ತಪ್ಪಿರುವುದಕ್ಕೆ ಸಾಕ್ಷಿಯಾಯಿತು.
ಆಸನಗಳು ಖಾಲಿ ಖಾಲಿ !
ಶನಿವಾರ ಬೆಳಿಗ್ಗೆ ಕೆಲ ಸಿಬ್ಬಂದಿ ಹೊರತುಪಡಿಸಿ, ಶೇ.80ರಷ್ಟು ಸಿಬ್ಬಂದಿ 10.30 ಗಂಟೆಯಾದರೂ ಬಂದಿರಲೇ ಇಲ್ಲ. ಕೆಲಸ ಕಾರ್ಯಗಳ ನಿಮಿತ್ತ ಬೇರೆ ಬೇರೆ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರು ಕಚೇರಿಯ ಒಳಗೆ ಹೋಗುವುದು ಖಾಲಿ ಕುರ್ಚಿಗಳನ್ನು ನೋಡುವುದು ವಾಪಸ್ ಬರುವುದು ಮಾಡುತ್ತಿದ್ದರು. ಬೆಳಿಗ್ಗೆಯೇ ಬಂದಿದ್ದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಪ್ರಮಾಣಪತ್ರಕ್ಕಾಗಿ ಸಿಬ್ಬಂದಿಯನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದದು ಕಂಡುಬಂತು.
‘ಟೀ ಕುಡಿಯಲು ಹೋದ್ರೆ ಕತೆ ಮುಗಿಯಿತು’
“ಆಫೀಸಿಗೆ ಬರೋದೆ ಲೇಟಾಗಿ, ಆ ನಡುವೆ ಯರ‍್ಯಾರೋ ಬಂದ್ರು ಅಂತ ಚಹಾ ಕುಡಿಯಲು, ಮಾತನಾಡಲು ಅಂತಾ ದಿಢೀರನೇ ಹೊರಗೆ ಹೋಗುತ್ತಾರೆ. ಅವರು ಬರುವವರೆಗೂ ತಾಸುಗಟ್ಟಲೇ ಕಾಯಬೇಕು. ಇದರಿಂದ ಸರಿಯಾದ ಸಮಯಕ್ಕೆ ಪ್ರಮಾಣಪತ್ರ ದೊರೆಯುತ್ತಿಲ್ಲ. ಕೆಲಸದ ಒತ್ತಡದ ನಡುವೆಯೂ ರೈತರು ಸೇರಿದಂತೆ ಅನಕ್ಷರಸ್ಥರನ್ನು ಪದೇ ಪದೆ ತಹಸೀಲ್ ಕಚೇರಿ ವಿನಾಃಕಾರಣ ಸುತ್ತಾರಿಸುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ, ಯಾರಿಗೇಳ್ತೀರಿ ಹೇಳಿಕೊಳ್ಳಿ ಅಂತಾರೆ” ಎಂದು ರೈತರೊಬ್ಬರು ಅಳಲು ತೋಡಿಕೊಂಡರು.
“ಡಿಸಿಯವರು ಕ್ರಮಕ್ಕೆ ಮುಂದಾಗಲಿ”
“ಈ ಹಿಂದಿನ ತಹಸೀಲ್ದಾರ್ ಇದ್ದಾಗ ಸಿಬ್ಬಂದಿಗಳು ಮನಸೋಇಚ್ಛೆ ವರ್ತಿಸುತ್ತಿದ್ದರು. ಇನ್ನು ಹೊಸ ತಹಸೀಲ್ದಾರ್ ಬಂದ ನಂತರ ಪರಿಸ್ಥಿತಿ ಸುಧಾರಣೆ ಆಗುತ್ತೆ ಅಂದುಕೊಂಡಿದ್ದೆವು. ಎನೂ ಬದಲಾವಣೆ ಆಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮಸ್ಕಿ ತಹಸೀಲ್ ಕಾರ್ಯಾಲಯಕ್ಕೆ ಖುದ್ದು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಬೇಕು, ಆಫೀಸಿಗೆ ಲೇಟಾಗಿ ಬರುವವರು ಮತ್ತು ಕರ್ತವ್ಯಲೋಪವೆಸಗಿದ ಮತ್ತು ವಿನಾಃಕಾರಣ ಕಡತ ವಿಲೇವಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು” ಎಂದು ನಾಗರಿಕರು ಒತ್ತಾಯಿಸಿದ್ದಾರೆ.