ಲೋಕಲ್ ನ್ಯೂಸ್: ರವಿ ಗೌಡನಬಾವಿ
ನಮ್ಮ ಮಸ್ಕಿ, ಸೆಪ್ಟೆಂಬರ್ 06
ಪಟ್ಟಣದ ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಅನಧಿಕೃತವಾಗಿ ಪುಟ್‌ಬಾತ್ ಮೇಲೆ ತಳ್ಳುವ ಬಂಡಿ, ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆಂದು ಶನಿವಾರ ಪುರಸಭೆಯವರು ತೆರವು ಕಾರ್ಯಾಚರಣೆ ನಡೆಸಿದರು.
ಸರ್ವಿಸ್ ರಸ್ತೆಯ ಪುಟ್‌ಬಾತ್ ಮೇಲೆ ತಿಂಡಿ, ತಿನಿಸುಗಳ ಮಾರಾಟದ ಅಂಗಡಿಗಳನ್ನು ಇಟ್ಟಿಕೊಂಡಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ತೆರವುಗೊಳಿಸುವಂತೆ ಈಗಾಗಲೇ ಸೂಚಿಸಿದರೂ ಕೆಲವರು ತೆರವು ಮಾಡಿರಲಿಲ್ಲ. ಆದ್ದರಿಂದ ಪೊಲೀಸರ ಸಹಕಾರದೊಂದಿಗೆ ಡಬ್ಬಾ ಅಂಗಡಿಗಳನ್ನು ತೆರವು ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು. ಕೆಲವೆಡೆ ಮಾಲೀಕರು ಬಾರದ ಕಾರಣ ಡಬ್ಬಾ ಅಂಗಡಿಗಳನ್ನು ಪುರಸಭೆಯವರು ವಶಕ್ಕೆ ಪಡೆದರು.
ಸಣ್ಣಪುಟ್ಟ ವ್ಯಾಪಾರಿಗಳ ಅಳಲು
“ಹೇಗೋ ಏನೋ ರಸ್ತೆ ಬದಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಸಣ್ಣಪುಟ್ಟ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದರಿಂದ ಮುಂದೇನು ಎನ್ನುವ ಆತಂಕ ಎದುರಾಗಿದೆ. ಫುಟ್‌ಪಾತ್ ಮೇಲೆ ಎರಡ್ಮೂರು ಗಂಟೆಯಷ್ಟೇ ವ್ಯಾಪಾರ ಮಾಡುತ್ತೇವೆ. ಕೆಲವೊಬ್ಬರು ದಿನವಿಡೀ ವ್ಯಾಪಾರ ಮಾಡಬಹುದು. ಆದರೆ ನಮ್ಮಂತ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ’ ಎಂದು ಸಣ್ಣಪುಟ್ಟ ವ್ಯಾಪಾರಿಗಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಬೇರೆಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು.
ಪ್ರೋಬೇಷನರಿ ಐಎಎಸ್ ಅಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ ಪ್ರತಿಕ್ರಿಯಿಸಿ “ಅಂಗಡಿಗಳನ್ನು ಹೊಂದಿದ್ದವರು ರಸ್ತೆ ಮೇಲೆ ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ಪುಟ್‌ಬಾತ್ ಮೇಲೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಯಾವ ನೋಟಿಸ್ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು. ತೆರವು ಕಾರ್ಯಾಚರಣೆಯಲ್ಲಿ ಪೌರಾಯುಕ್ತ ನರಸರಡ್ಡಿ, ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ಕೆ.ರಂಗಯ್ಯ, ಪುರಸಭೆಯ ನೈರ್ಮಲ್ಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರಿದ್ದರು.
