(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು. ಮೇ 29
ಮಸ್ಕಿ ಪಟ್ಟಣದ ಹಳೆ ಬಸ್ ನಿಲ್ದಾಣದ ಪ್ರದೇಶ ಕಳೆದ ಹಲವು ತಿಂಗಳಿನಿಂದ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಈ ಮೊದಲೇ ಇಕ್ಕಟ್ಟಾದ ಪ್ರದೇಶದಲ್ಲಿ ದ್ವಿಪಥ ರಸ್ತೆ ಕಾಮಗಾರಿ ಅಧ್ವಾನ ಸೃಷ್ಟಿಸಿದ್ದು, ರಾಷ್ಟ್ರೀಯ ಹೆದ್ದಾರಿ 150 (ಎ) ಮೂಲಕ ಹಾದುಹೋಗುವ ವಾಹನಗಳು ದಿನವೂ ಪತರಗುಟ್ಟುತ್ತಿವೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಉಂಟಾಗುವ ಟ್ರಾಫಿಕ್ ಕಿರಿಕಿರಿಯಿಂದ
ಜನರು ರೋಸಿ ಹೋಗಿದ್ದಾರೆ.
ಹೆದ್ದಾರಿ ಆಧುನೀಕರಣದ ಹಿನ್ನೆಲೆಯಲ್ಲಿ ಕೈಗೊಂಡಿರುವ ಒಳಚರಂಡಿ, ಪಾದಾಚಾರಿ ರಸ್ತೆ ನಿರ್ಮಾಣ, ತಂಗುದಾಣ, ರಸ್ತೆ ವಿಭಜಕ ಹಾಗೂ ಹೈಮಾಸ್ಟ್ ದೀಪ ಅಳವಡಿಕೆಯ ಕಾಮಗಾರಿ ವಿಳಂಬವಾಗಿದ್ದು, ಪಟ್ಟಣದ ನಿವಾಸಿಗಳು ಹಾಗೂ ಇಲ್ಲಿಗೆ ಆಗಮಿಸುವ ನೂರಾರು ಗ್ರಾಮಗಳ ಸಾರ್ವಜನಿಕರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಸಣ್ಣ ಪುಟ್ಟ ಕೆಲಸಕ್ಕೆ ಬಂದರೂ ಇನ್ನಿಲ್ಲದ ವ್ಯತ್ಯಯ ಅನುಭವಿಸುವಂತಾಗಿದೆ. ಹೆದ್ದಾರಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಎಡಬಲದಲ್ಲಿ ರಸ್ತೆ ಅಗೆಯಲಾಗಿದ್ದು, ಇಕ್ಕಟ್ಟಾದ ಜಾಗದಲ್ಲಿ ಜನಸಂಚಾರಕ್ಕೆ ಆಪತ್ತು ಎದುರಾಗಿದೆ.
ವಾಹನ ಸಂಚಾರಕ್ಕೆ ವ್ಯತ್ಯಯ
ಎನ್‌ಎಚ್ 150 (ಎ) ಹೆದ್ದಾರಿ ಕಲಬುರಗಿ-ಬೆಂಗಳೂರು ಪ್ರಮುಖ ರಸ್ತೆ ಮಾರ್ಗವಾಗಿದ್ದು, ಅಲ್ಲದೇ ಈ ಮಾರ್ಗದ ಮೂಲಕ ದಿನವೂ ನೂರಾರು ಸಾರಿಗೆ ಬಸ್ಸುಗಳಲ್ಲದೇ ಸಾವಿರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಆದರೆ ಕಳೆದ ಹಲವು ತಿಂಗಳಿನಿಂದ ಕಾಮಗಾರಿ ವಿಳಂಬದಿಂದಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಉದ್ದೇಶಿತ ಸ್ಥಳಗಳಿಗೆ ತೆರಳಲು ಅಡಚಣೆ ಎದುರಿಸುತ್ತಿದ್ದಾರೆ. ಈ ನಡುವೆ ಮಸ್ಕಿ ಪಟ್ಟಣ ಸಮೀಪಿಸುತ್ತಿದ್ದಂತೆ ಇಲ್ಲಿಂದ ವಾಹನ ದಾಟಿದರೆ ಸಾಕಪ್ಪಾ ! ಎಂದು ವಾಹನ ಚಾಲಕರು ಉದ್ಘಾರ ತೆಗೆಯುತ್ತಿದ್ದಾರೆ.
“ಮುಂದ ಮುಂದ ಕೆಲ್ಸಾ ಮಾಡಾಕತ್ತ್ಯಾರ್ರೀ ಹಿಂದ ಹಿಂದ ಬಿದ್ಕಂತ ಹೊಂಟೈತ್ರಿ”
“ನಾವು ನೋಡಾಕತ್ತೀವ್ರಿ, ಗುತ್ತೇದರ‍್ರು ಮುಂದ ಮುಂದ ಕೆಲ್ಸಾ ಮಾಡಾಕತ್ತಾö್ಯರ ಆದ್ರ, ಹಿಂದ್ ಹಿಂದ್ ಬಿದ್ಕಂತ ಹೊಂಟೈತ್ರಿ. ಕೆಲ್ಸಾ ಮಾಡಿ ನಾಲ್ಕಾರು ತಿಂಗ್ಳ ಆಗಿಲ್ಲ ಆಲೇ ಚರಂಡಿಗುಳು ಬಿರುಕು ಬಿಟ್ಟಾವ್ರಿ, ಸಿಮೆಂಟು ಡ್ರೈನೇಜು ಕುಸ್ದು ಬಿದ್ದೈತಿ ಕೆಂಬ್ಣ ಛಡಿ ತೇಲ್ಯಾವ. ಮನಸಿಗೆಬಂದಂಗ ಕೆಲ್ಸಾ ಮಾಡಿದ್ರ ಹೆಂಗ್ರಿ. ಕಾಮಗಾರಿ ಮುಗುದು ಉದ್ಘಾಟನೆಯಾಗಾದ್ರೋಳಗ ಎಲ್ಲೆಲ್ಲಿ ಚರಂಡಿ ಕುಸಿತಾವೋ ಗೊತ್ತಿಲ್ಲ. ಇನ್ನ ಡಾಂಬರ್ ಹೆಂಗಬೇಕಂಗ ಹಾಕ್ಯಾರ. ಇದು ಎರ‍್ಡು ದಾರಿ ರಸ್ತಾ ಅಂತಾ ! ಎರ‍್ಡು ದಾರೀನೋ, ಮೂರು ದಾರಿನೋ ಜನ್ರಿಗೆ ತಿಳಿವಲ್ತು. ಏನಾನ ಕೆಲ್ಸಾ ಇದ್ರ ರಸ್ತೆಗೆ ಬರಬೇಕಂದ್ರ ಎದಿ ಝಲ್ ಅಂತೈತಿ ನೋಡ್ರಿ” ಎಂದು ಪಟ್ಟಣದ ಸಾರ್ವಜನಿಕರೊಬ್ಬರು ಗುತ್ತಿಗೆದಾರರು, ಅಧಿಕಾರಿಗಳ ಬೇಜವಾಬ್ದಾರಿಯ ನಿರ್ವಹಣೆಗೆ ರೇಗಿದರು.
‘ಪುರ’ದ ಉಡುಗೊರೆಗೆ ಮೌನವಾದ ‘ಧ್ವನಿಗಳು’
ದ್ವಿಪಥ ರಸ್ತೆ ನಿರ್ಮಾಣ ಕಳಪೆಯಾಗಿ ನಡೆಯುತ್ತಿದೆ. ಅಂದಾಜು ಪತ್ರಿಕೆಯಂತೆ ಕೆಲಸ ಮಾಡುತ್ತಿಲ್ಲ. ಒಳಚರಂಡಿ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್, ಕಬ್ಬಿಣ ಬಳಸಿಲ್ಲ, ಸರಿಯಾಗಿ ಬೆಡ್ ಹಾಕಿಲ್ಲ, ಕ್ಯೂರಿಂಗ್ ಮಾಡುತ್ತಿಲ್ಲ, ನಿಗದಿತ ಅಳತೆಯಲ್ಲಿ ನಿರ್ಮಾಣ ಮಾಡದೇ ಮನಬಂದಂತೆ ಕೆಲಸ ಮಾಡಲಾಗಿದೆ ಎಂದು ತಗಾದೆ ತೆಗೆದು, ‘ಹಾದಿರಂಪ-ಬೀದಿರಂಪ’ ಮಾಡಿದ್ದ ಕೆಲವರು ಆ ನಂತರದ ದಿನಗಳಲ್ಲಿ ಆ‘ಪುರ’ದಿಂದ ಬಂದ ಉಡುಗೊರೆಗೆ ಮೌನವಾದರು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಚರ್ಚೆ ಇಂದು-ನಿನ್ನೆಯದಲ್ಲ. ಹೀಗಾಗಿ ಗುತ್ತಿಗೆದಾರರು ಆಡಿದ್ದೇ ಆಟ ಎನ್ನುವಂತಾಗಿದೆ, “ಮಹಾಪ್ರಸಾದಕ್ಕೆ ಮಣಿಯದವರುಂಟೇ ಮಹಾಪ್ರಭು” ಎಂದು ಕೆಲವರು ಮಾರ್ಮಿಕವಾಗಿ ಹೇಳುತ್ತಾರೆ.
ಪುರಸಭೆ ಮೇಲೆ ಬೊಟ್ಟು
ದ್ವಿಪಥ ರಸ್ತೆ ಕಾಮಗಾರಿ ವಿಳಂಬಕ್ಕೆ ಪುರಸಭೆ ಬೇಜವಾಬ್ದಾರಿಯೇ ಕಾರಣ ಎಂದು ಕೆಲವರು ಬೊಟ್ಟು ಮಾಡಿ ತೋರಿಸುತ್ತಿದ್ದು, ಒತ್ತುವರಿ ತೆರವಿನ ಪ್ರಕ್ರಿಯೆ ಸಂಬಂಧಿಸಿದಂತೆ ಉಂಟಾದ ಗೊಂದಲದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಕೆಲಸ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ಕೆಲ ಕಟ್ಟಡಗಳನ್ನು ಉಳಿಸಲು, ‘ಅನುಕೂಲಸಿಂಧು’ ಕಾಮಗಾರಿಯ ಉದ್ದೇಶದಿಂದ ಒಳಗೊಳಗೆ ‘ತಂತ್ರಗಾರಿಕೆ’ ಮಾಡಿದ್ದು, ಹೀಗಾಗಿ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ‘ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವ ಹಾಗೆ, ದಿನವೂ ಸಾರ್ವಜನಿಕರು, ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿರುವುದಂತೂ ತಪ್ಪಿಲ್ಲ.
ಚರಂಡಿ ನೀರಲ್ಲಿ ಸಿಮೆಂಟ್, ಕಂಕರ್ ಸುರಿದು ಕೆಲಸ
ಪಟ್ಟಣದಲ್ಲಿ ದ್ವಿಪಥ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿ ನೀರು ಹಾಗೂ ಮಳೆ ನೀರು ನಿಂತ ತಗ್ಗಿನಲ್ಲೇ ಗುತ್ತಿಗೆದಾರರು ಸಿಮೆಂಟ್, ಕಂಕರ್ ಸುರುವಿ ಕಾಮಗಾರಿ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗೆ ಮನಬಂದಂತೆ ಕೆಲಸ ನಿರ್ವಹಿಸಿದರೆ ಸದೃಢ ಒಳಚರಂಡಿ ನಿರ್ಮಿಸಲು ಸಾಧ್ಯವೇ ? ಕಾಮಗಾರಿ ಕೈಗೊಂಡ ಕೆಲ ದಿನಗಳಲ್ಲೇ ಅದು ಕುಸಿದು ಬಿದ್ದರೂ ಅಚ್ಚರಿಯೇನಿಲ್ಲ ? ಹಳೆ ಬಸ್ ನಿಲ್ದಾಣ ಪ್ರದೇಶ ಯಾವಾಗಲೂ ಜನನಿಬಿಡ ಪ್ರದೇಶವಾಗಿದ್ದು, ಒಂದು ವೇಳೆ ಚರಂಡಿ ಕುಸಿದು ಯಾವುದೇ ರೀತಿಯ ಹಾನಿಯಾದರೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕೂಡಲೇ ಕಳಪೆ ಕಾಮಗಾರಿಯನ್ನು ತಡೆಯಬೇಕು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಬೀದಿಗೆ ಬಿದ್ದ ಬೀದಿ ವ್ಯಾಪಾರಿಗಳು
ಪಟ್ಟಣದ ನೂರಾರು ಬೀದಿ ವ್ಯಾಪಾರಿಗಳು ತರಕಾರಿ, ಹಣ್ಣು, ಹೂವು, ಗೂಡಂಗಡಿ, ಚಮ್ಮಾರಿಕೆ, ಸಣ್ಣ, ಹೋಟೆಲ್ ಸೇರಿದಂತೆ ಹತ್ತು ಹಲವು ಬಗೆಯ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಹಲವು ತಿಂಗಳ ಹಿಂದೆ ದ್ವಿಪಥ ರಸ್ತೆ ಆರಂಭವಾಗಿದ್ದೇ ತಡ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ದ್ವಿಪಥ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದ್ದು ಕಳೆದ ಹಲವು ದಿನಗಳಿಂದ ಇನ್ನಿಲ್ಲದ ಕಿರುಕುಳ ಅನುಭವಿಸುತ್ತಿದ್ದೇವೆ. ಈ ಮೊದಲಿಗಿಂತಲೂ ಧೂಳು ಹೆಚ್ಚಿದ್ದು, ವಾಹನ ದಟ್ಟಣೆಯ ಒತ್ತಡ ಹಾಗೂ ಜೀವಭಯದಲ್ಲೇ ವ್ಯಾಪಾರ ಮಾಡುವಂತಾಗಿದೆ. ಈ ಹಿಂದಿನ ನೆಲೆ ಕಳೆದುಕೊಂಡಿರುವುದರಿಂದ ಮುಂದೆ ಹೊಟ್ಟೆಪಾಡು ನಡೆಸುವುದು ಹೇಗೆ ಎಂಬ ಆತಂಕ ಕಾಡುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಂಬAಧಿಸಿದ ಇಲಾಖೆಯವರು ನಮ್ಮ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಬೀದಿಬದಿ ವ್ಯಾಪಾರಸ್ಥರ ಅಳಲಾಗಿದೆ.
ಟ್ರಾಫಿಕ್ ಆದರೂ ಕಾಣದ ಪೊಲೀಸರು ?
ಬೆಳಿಗ್ಗೆಯಿಂದಲೇ ವಿಪರೀತ ಟ್ರಾಫಿಕ್‌ನಿಂದ ವಾಹನ ಚಾಲಕರು, ಸಾರ್ವಜನಿಕರು ವಿಪರೀತ ಸಮಸ್ಯೆ ಎದುರಿಸುತ್ತಿದ್ದರೂ ಪೊಲೀಸರೂ ಕಾಣಿಸುವುದಿಲ್ಲ. ಒಮ್ಮೊಮ್ಮೆ ಬರುತ್ತಾರೆ, ಒಮ್ಮೊಮ್ಮೆ ಇಲ್ಲ. ಇಕ್ಕಟ್ಟಾದ ಜಾಗದಲ್ಲಿ ವಾಹನ ದಟ್ಟಣೆ ಹೆಚ್ಚಿ, ಸವಾರರು ಪರಸ್ಪರ ಜಗಳ ಕಾದ ಘಟನೆಗಳು ನಡೆದಿವೆ. ಅಲ್ಲದೇ ಕೆಲವರು ಬಿದ್ದು ಗಾಯಮಾಡಿಕೊಂಡಿದ್ದಾರೆ. ಅನ್ಯ ಇಲಾಖೆಗಳ ಮಾಡುವ ಅವ್ಯವಸ್ಥೆಗೆ ಪೊಲೀಸರಾದರೂ ಎಲ್ಲಿಯವರೆಗೆ ನಿಭಾಯಿಸಬೇಕು ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.