ನಮ್ಮ ಸಿಂಧನೂರು, ಫೆಬ್ರವರಿ 24
ಮಸ್ಕಿ ಪಟ್ಟಣದ ಕುಡಿವ ನೀರಿನ ಕೆರೆ ತಳಕಂಡಿದ್ದು, ಸಾರ್ವಜನಿಕರು ನೀರಿಗಾಗಿ ದಿನವೂ ಪರದಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ಪಕ್ಕದಲ್ಲಿರುವ ಕುಡಿವ ನೀರಿನ ಕೆರೆ ಫೆಬ್ರವರಿಯಲ್ಲೇ ಖಾಲಿಯಾಗಿದ್ದು, ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಪಟ್ಟಣದ ಕುಡಿವ ನೀರಿನ ಕೆರೆ ಸಣ್ಣದಿದ್ದು, ಇಲ್ಲಿನ ಜನಸಂಖ್ಯೆಗೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ತೊಡಕಾಗಿ ಪರಿಣಮಿಸಿದೆ. ಕೆರೆಗೆ ಬೋರ್‌ವೆಲ್‌ನಿಂದ ನೀರು ಹರಿಸಲಾಗುತ್ತಿದ್ದು, ಆದರೆ ಕುಂಭಕರ್ಣನಿಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಸಾಲುತ್ತಿಲ್ಲ. ಡಿಸೆಂಬರ್‌ನಲ್ಲಿ ತುಂಗಭದ್ರಾ ಮುಖ್ಯ ನಾಲೆಗೆ ನೀರಿನ ಹರಿವು ಸ್ಥಗಿತಗೊಂಡಿದ್ದು, ಕೇವಲ ಒಂದೂವರೆ ತಿಂಗಳಲ್ಲಿ ಕೆರೆ ತಳ ಕಂಡಿರುವುದು ಸಮಸ್ಯೆ ಇನ್ನಷ್ಟು ಜಠಿಲಗೊಳ್ಳಲು ಕಾರಣವಾಗಿದೆ. ಪಟ್ಟಣದ ನಿವಾಸಿಗಳ ಕುಡಿವ ಮತ್ತು ಬಳಕೆ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರ್ಯಾಯ ಕ್ರಮದ ಬಗ್ಗೆ ಮುಂದಾಲೋಚನೆ ಮಾಡಬೇಕಿದ್ದ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ಮಂಡಳಿಗಳು ಬೇಜವಾಬ್ದಾರಿ ವಹಿಸಿದ ಕಾರಣ ಜನರು ಈ ಬಾರಿಗೆ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ, ಇನ್ನೂ ಮಾರ್ಚ್, ಏಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ ಪರಿಸ್ಥಿತಿ ಇನ್ನೇಗೆ ಇರುತ್ತದೆಯೋ ಎಂದು ಸಾರ್ವಜನಿಕರು ಆಂತಕ್ಕೀಡಾಗಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ ಕೆರೆ ತುಂಬಿಸದೇ ಹೋದರೆ ಜನರು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.