ಲೋಕಲ್ ನ್ಯೂಸ್: ರವಿ ಗೌಡನಭಾವಿ
ನಮ್ಮ ಮಸ್ಕಿ, ಆಗಸ್ಟ್ 19
ಗೌರಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್ ಹೇಳಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಸ್ಕಿ ಠಾಣೆಯಿಂದ ಏರ್ಪಡಿಸಲಾಗಿದ್ದ ಶಾಂತಿಸಭೆಯಲ್ಲಿ ಭಾಗಹಿಸಿ ಮಾತನಾಡಿದ ಅವರು, “ಮಸ್ಕಿ ಪಟ್ಟಣ ಆಶೋಕನ ನಾಡಾಗಿದ್ದು, ಪಟ್ಟಣಕ್ಕೆ ಕಪ್ಪು ಚುಕ್ಕೆ ಬಾರದಂತೆ ಗಣೇಶ ಹಬ್ಬವನ್ನು ಎಲ್ಲರೂ ಶಾಂತಿ- ಸೌಹಾರ್ದತೆಯಿಂದ ಆಚರಿಸುವ ಮೂಲಕ ಮಾದರಿಯಾಗಬೇಕು” ಎಂದು ಸಲಹೆ ನೀಡಿದರು.
‘ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ’
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೊದಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ನೀಡಲು ತಾಲೂಕಾಡಳಿತ, ಪೊಲೀಸ್ ಠಾಣೆ, ಪುರಸಭೆ ಮತ್ತು ಜೆಸ್ಕಾಂ ಇಲಾಖೆಯವರು ಒಂದೆಡೆ ಸೇರಿ ಅನುಮತಿ ನೀಡುತ್ತಾರೆ” ಎಂದು ಅವರು ಹೇಳಿದರು.

‘ಮುಂಜಾಗ್ರತೆ ಕ್ರಮ ಕೈಗೊಳ್ಳಲು ಇಲಾಖೆಯವರಿಗೆ ಸೂಚನೆ’
“ಗಣೇಶ ವಿಸರ್ಜನೆಯ ಸಮಯದಲ್ಲಿ ಯಾವುದೇ ರೀತಿಯ ಅನನಕೂಲತೆ ಆಗದಂತೆ ಮುಂಜಾಗ್ರತೆ ವಹಿಸುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗುಂಡಿಗಳಿದ್ದರೆ ಪಿಡಬ್ಲ್ಯುಡಿ ಇಲಾಖೆಯವರು ಮುಚ್ಚಿಸಬೇಕು, ವಿದ್ಯುತ್ ತಂತಿಗಳು ಅಡ್ಡವಿದ್ದರೆ ಜೆಸ್ಕಾಂನವರು ಮುಂಚಿತವಾಗಿ ಜಾಗೃತಿವಹಿಸಬೇಕು. ಹಬ್ಬದ ಸಮಯದಲ್ಲಿ ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಪುರಸಭೆ ಇಲಾಖೆಯವರು ಪರಸ್ಪರ ಸಮನ್ವಯ ಸಾಧಿಸಿ ಕರಾರುವಕ್ಕಾಗಿ ಕಾರ್ಯನಿರ್ವಹಿಸುವಂತೆ’ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದರು
‘ರಾತ್ರಿ 10 ಗಂಟೆ ನಂತರ ಡಿಜೆ ನಿಷೇಧ’
“ಡಿಜೆ ಸಂಗೀತ ವ್ಯವಸ್ಥೆಗಳ ಅಳವಡಿಕೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಯವರ ಆದೇಶದಂತೆ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ವಿವಿಧ ಗಣೇಶೋತ್ಸವ ಮಹಾಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಹಕರಿಸಬೇಕು” ಎಂದು ತಿಳಿಸಿದರು. ತಹಸೀಲ್ದಾರ್ ಮಲ್ಲಪ್ಪ ಕೆ.ಯರಗೋಳ, ಮುಖಂಡರಾದ ಮಹಾದೇವಪ್ಪಗೌಡ, ದೊಡ್ಡಪ್ಪ ಮುರಾರಿ, ಅಬ್ದುಲ್ ಅಜೀಜ್ ಮಾತನಾಡಿದರು.
ಸಿಸಿ ಕ್ಯಾಮೆರಾ ಅಳವಡಿಕೆಗೆ ಒತ್ತಾಯ
ಗಣೇಶ ಹಬ್ಬದ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ. ಹಬ್ಬ ಮುಗಿದ ನಂತರ ಸಿಸಿ ಕ್ಯಾಮೆರಾ ಕೆಲಸ ಮಾಡುವುದಿಲ್ಲ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆದಾಗ ಪರಿಶೀಲಿಸಲು ಸಿಸಿ ಕ್ಯಾಮೆರಾಗಳ ಪುಟೇಜ್ ಸಿಗುವುದಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಿಸಿ ಕ್ಯಾಮೆರಾಗಳನ್ನು ಕೂಡಲೇ ಅಳವಡಿಸಬೇಕೆಂದು ಆರ್.ಕೆ.ನಾಯಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ಕೆ.ರಂಗಯ್ಯ, ಮುದಗಲ್ ಪಿಎಸ್‌ಐ ವೆಂಕಟೇಶ ಪುರಸಭೆ, ಆಗ್ನಿಶಾಮಕ ಠಾಣೆ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಸೇರಿದಂತೆ ಮುಖಂಡರಿದ್ದರು.
