ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 8
ಮಸ್ಕಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಹೆದ್ದಾರಿಯಲ್ಲಿ ಖಾಸಗಿ ಕಾನ್ವೆಂಟ್ ಶಾಲಾ ವಾಹನಕ್ಕೆ ಸಿಂಧನೂರು ಕಡೆಯಿಂದ ಹಿಂದೆ ಬಂದ ಲಾರಿಯೊಂದು ಗುರುವಾರ ಸಂಜೆ ಡಿಕ್ಕಿ ಹೊಡೆದಿದ್ದು, ಆಗಬಹುದಾಗಿ ಭಾರಿ ಅನಾಹುತ ಕೂದಳೆಯ ಅಂತರದಲ್ಲಿ ತಪ್ಪಿದೆ. ಈ ಘಟನೆಯಲ್ಲಿ ಜುಪಿಟರ್ ಶಾಲೆಯ 6ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ವಿದ್ಯಾರ್ಥಿಗಳು ಗಂಡಾಂತರದಿಂದ ಪಾರಾಗಿದ್ದಾರೆ.
ಶಾಲಾ ತರಗತಿ ಮುಗಿದ ನಂತರ ವಾಹನದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ವಾಹನದಿಂದ ರಸ್ತೆ ಬದಿ ಕೆಳಗೆ ಇಳಿಸುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸೆ.5ರ ಕಪಗಲ್ ಭೀಕರ ಅಪಘಾತ
ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ಶಾಲಾ ವಾಹನದ ನಡುವೆ ಸೆಪ್ಟೆಂಬರ್ 5ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಮಾಸುವ ಮುನ್ನವೇ ಕೂದಲೆಳೆಯ ಅಂತರದಲ್ಲಿ ಅಪಘಾತ ತಪ್ಪಿರುವುದು ಪಾಲಕ ಸಮುದಾಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಕಪಗಲ್ ದುರ್ಘಟನೆ ನಂತರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಸರ್ಕಾರಿ ಸೇರಿದಂತೆ ಖಾಸಗಿ-ಶಾಲಾ ಕಾಲೇಜುಗಳಿಗೆ ನಿರ್ದೇಶನಗಳನ್ನು ನೀಡಿದ್ದವು. ಆದರೂ ಕೆಲ ಖಾಸಗಿ ಶಾಲಾ-ಕಾಲೇಜುಗಳು ನಿರ್ದೇಶನಗಳನ್ನು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದೇ ಇರುವುದರಿಂದ ಕೆಲವರು ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅಪಘಾತಗಳಾಗುವ ಸಾಧ್ಯತೆ ಇದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಪಾಲಕರು ಆಗ್ರಹಿಸಿದ್ದಾರೆ.