ಜಿಲ್ಲಾ ಸಂಚಾರ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 05
ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ಶಾಲಾ ವಾಹನದ ನಡುವೆ ಗುರುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾನ್ವಿಯ ಲೋಯೊಲಾ ಶಾಲೆಯ ವಾಹನ ಮಕ್ಕಳನ್ನು ಕರೆದುಕೊಂಡು ಶಾಲೆಯ ಕಡೆಗೆ ಸಂಚರಿಸುತ್ತಿತ್ತು, ಈ ಸಂದರ್ಭದಲ್ಲಿ ಸಿಂಧನೂರು ಕಡೆಯಿಂದ ಬಂದ ಸಾರಿಗೆ ಬಸ್ ಜೋರಾಗಿ ಡಿಕ್ಕಿ ಹೊಡೆದಿದ್ದು, ಈ ಅವಘಡ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ತೆಗ್ಗು ತಪ್ಪಿಸಲು ಹೋಗಿ ಶಾಲಾ ವಾಹನಕ್ಕೆ ಡಿಕ್ಕಿ
ಕಪಗಲ್ ಹೊರವಲಯದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆದಿದ್ದು, ಬಸ್ ಚಾಲಕ ತೆಗ್ಗು ತಪ್ಪಿಸಿ ಚಲಾಯಿಸಲು ಹೋದ ಪರಿಣಾಮ ಶಾಲಾ ವಾಹನಕ್ಕೆ ಬಸ್ ಡಿಕ್ಕಿಯಾಗಿದೆ. ಇದರಿಂದ ಮುಗ್ದ ಕಂದಮ್ಮಗಳು ಬಲಿಯಾಗಿ, ನೋವಿನ ಮಡಿಲಿಗೆ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚತುಷ್ಪಥ ಕಾಮಗಾರಿಯಲ್ಲಿ ಎಚ್ಚರಿಕೆ ಫಲಕಗಳಿಗೆ ಕೋಕ್, ಸಾರ್ವಜನಿಕರ ಆಕ್ರೋಶ
“ಕಳೆದ ಹಲವು ದಿನಗಳಿಂದ ಇಲ್ಲಿ ರೋಡು ಮಾಡ್ಯಾಕ ಹತ್ತಾö್ರ್ರಿ. ಒಂದು ಕೆಂಪು ಝಂಡಾ ಹಾಕಿಲ್ಲ, ಯಾವ್ ಬೋರ್ಡು ಇಟ್ಟಿಲ್ಲ. ಹೆಂಗಬೇಕಂಗ್ ರಸ್ತೆ ಮಾಡಾಕತ್ತ್ಯಾರ . ಸ್ವಲ್ಪ ಯಾಮಾರಿದ್ರ ಸಣ್ಣ ಗಾಡಿ ಅಲ್ಲ ಎಲ್ಲಾ ಗಾಡಿ ಪಲ್ಟಿ ಹೊಡಿತಾವ. ಈ ರೋಡೊ ಮಾಡ್ಸೋ ಗುತ್ತೇದಾರ ಯಾವನೋ ಏನೋ, ಜನಸಾಮಾನ್ಯರ ಪ್ರಾಣಕ್ಕ ಬೆಲಿ ಇಲ್ದಂಗ ಆಗೇತಿ. ಈ ಬಸ್ಸಿನವರು ಕೂಡ ಅರ್ವು ಇಲ್ಲದಂಗ ಬಸ್ ಓಡಸ್ತಾರ. ಸಣ್ಣ ಹುಡ್ರು ಮ್ಯಾಲೆ ಗಾಡಿ ಏರಿಸಾರಲ, ಇವ್ರ ಜೀವ ತಂದ ಕೊಡ್ತಾರನು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಕಾಮಗಾರಿ ನಿರ್ವಹಣೆ ಅಪಘಾತಕ್ಕೆ ಕಾರಣವಾಯಿತೆ ?
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದ್ದು, ಕಪಗಲ್ ಹೊರವಲಯದಲ್ಲಿ ಯಾವುದೇ ರೀತಿಯ ಸೂಚನಾ ಫಲಕಗಳನ್ನಾಗಲಿ ಎಚ್ಚರಿಕೆ ಫಲಕಗಳನ್ನಾಗಲಿ ಅಳವಡಿಸಿಲ್ಲ. ಇಲ್ಲಿ ಯಾವುದೇ ಕಾವಲುಗಾರರನ್ನು ನೇಮಿಸಿಲ್ಲ. ಮನಬಂದAತೆ ಹಿಟಾಚಿಗಳ ಮೂಲಕ ತಗ್ಗುಗಳನ್ನು ಅಗೆದು ಹಾಗೆಯೇ ಬಿಡಲಾಗಿದ್ದು, ಇದರಿಂದ ದಿನವೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಾರ್ವಜನಿಕರು ವಿಶ್ಲೇಷಿಸಿದ್ದಾರೆ.
‘ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’
ಕೂಡಲೇ ಜಿಲ್ಲಾಡಳಿತ ಅಪಘಾತದ ಹೊಣೆ ಹೊತ್ತುಕೊಂಡು, ತನಿಖೆಗೆ ಆದೇಶಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ವಿತರಿಸಬೇಕು, ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸಾ ವೆಚ್ಚ ಭರಿಸಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿ ಪಾಲಕರು ಸೇರಿದಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
ತಂಡೋಪ ತಂಡವಾಗಿ ಬಂದ ಜನ ಕಣ್ಣೀರಾದರು !
ಅಪಘಾತದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ಕೆಲಸ ಕಾರ್ಯಗಳಿಗೆ ಈ ರಸ್ತೆಯ ಮೂಲಕ ಹೊರಟಿದ್ದ ಜನರು ಘಟನಾ ಸ್ಥಳಕ್ಕೆ ಬಂದು ಕಣ್ಣೀರಾದರು. ಇನ್ನೂ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೂ ಮಕ್ಕಳಿಗೆ ಆದ ನೋವನ್ನು ಕಂಡು ಮಮ್ಮಲ ಮರುಗಿದರು. ಇನ್ನು ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿತು. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿತು.