(ವರದಿ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 1
ರಾಯಚೂರು ಜಿಲ್ಲೆಯಲ್ಲೇ ಗುರುಗುಂಟಾ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ಪ್ರಖ್ಯಾತಿಯನ್ನು ಪಡೆದಿದ್ದು, ಪ್ರತಿವರ್ಷವೂ ಇಲ್ಲಿ ನಡೆಯುವ ಜಾನುವಾರು ಜಾತ್ರೆಗೆ ಹತ್ತಾರು ಜಿಲ್ಲೆಗಳ ರೈತರು ತಮ್ಮ ಎತ್ತುಗಳೊಂದಿಗೆ ಆಗಮಿಸುತ್ತಾರೆ. ಆದರೆ ಈ ಬಾರಿ ಬೇಸಿಗೆಯ ಬಿಸಿಲ ‘ಝಳ’ದ ಕಾರಣ ಜಾನುವಾರು ಜಾತ್ರೆ ಬಹುಬೇಗನೇ ಮುಕ್ತಾಯಗೊಂಡಿದೆ.
ಶ್ರೀ ಅಮರೇಶ್ವರ ಜಾನುವಾರು ಜಾತ್ರೆಗೆ ದಶಕಗಳ ಇತಿಹಾಸವೇ ಇದ್ದು, ಇಲ್ಲಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ತಳಿಗಳ ಎತ್ತುಗಳು ಮಾರಾಟಕ್ಕೆ ಬರುವುದು ವಾಡಿಕೆಯಾಗಿದೆ. ಎತ್ತುಗಳ ಮಾರಾಟಕ್ಕೆ ಬಹಳಷ್ಟು ರೈತರು ಬರುವುದರಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ಅನ್ಯ ರಾಜ್ಯದ ವ್ಯಾಪಾರಿಗಳು ಎತ್ತಿಗೆ ಬೇಕಾಗುವ ಹಗ್ಗ, ಗೆಜ್ಜೆ, ಕೊಂಬಣಸು, ಮಿಣಿ ಸೇರಿದಂತೆ ಒಕ್ಕಲುತನದ ರೈತರು ಬಳಸುವ ತರಹೇವಾರಿ ಸಾಮಗ್ರಿಗಳನ್ನು ಇಲ್ಲಿ ಮಾರುತ್ತಾರೆ. ಈ ಬಾರಿ ಬೇಗನೇ ಜಾನುವಾರು ಜಾತ್ರೆ ಮುಗಿದಿರುವುದು ಈ ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.
ಟ್ರ್ಯಾಕ್ಟರ್ ಬಳಕೆ ಹೆಚ್ಚಳ, ಎತ್ತುಗಳ ಸಂಖ್ಯೆ ಕ್ಷೀಣ
ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಎತ್ತುಗಳ ಬದಲಿಗೆ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳ ಬಳಕೆ ಹೆಚ್ಚಳಗೊಂಡಿದ್ದು, ಒಕ್ಕಲುತನ ಮಾಡುವ ಕುಟುಂಬಗಳು ಎತ್ತಿನ ಬದಲು ಟ್ರ್ಯಾಕ್ಟರ್ ಗಳನ್ನು ಕೊಂಡುಕೊಂಡಿದ್ದಾರೆ. ಹಾಗಾಗಿ ಜಾತ್ರೆಗೆ ಬರುವ ಎತ್ತುಗಳು, ಹೋರಿಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿದೆ. ಬಹಳಷ್ಟು ದೊಡ್ಡ ರೈತರ ಮನೆಯಲ್ಲಿಯೇ ಈಗ ಎತ್ತುಗಳು ಕಾಣಸಿಗುವುದು ಅಪರೂಪವಾಗಿದೆ, ಇನ್ನೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರ ಮನೆಯಲ್ಲಿ ಎತ್ತುಗಳು ಉಳಿದುಕೊಂಡಿವೆ. ಮಳೆ ಅಭಾವ, ಬರಗಾಲ, ಎತ್ತುಗಳ ಸಾಕಣೆಗೆ ಅಗತ್ಯ ಅನುಕೂಲಗಳ ಕೊರತೆ, ನಿರುದ್ಯೋಗ ಸಮಸ್ಯೆಯಿಂದ ಬಹಳಷ್ಟು ಜನರು ಎತ್ತುಗಳನ್ನು ಮಾರಿ, ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗಿದ್ದಾರೆ ಎಂದು ರೈತರೊಬ್ಬರು ಹೇಳುತ್ತಾರೆ.
ಅಮರೇಶ್ವರ ಜಾತ್ರೆಯಲ್ಲಿ ತಂದ ಎತ್ತು
ಈ ಹಿಂದೆ ರೈತರು ತಮ್ಮ ಎತ್ತುಗಳ ಮಾರಾಟ ಮತ್ತು ಹೊಸ ಎತ್ತುಗಳನ್ನು ಕೊಳ್ಳಲು ಅಮರೇಶ್ವರ ಜಾತ್ರೆಯೇ ಪ್ರಮುಖ ಕೊಂಡಿಯಾಗಿತ್ತು. ಇಲ್ಲಿಗೆ ಸುತ್ತಮುತ್ತಲಿನ ಹತ್ತಾರು ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರದ ಕಡೆಯಿಂದಲೂ ವಿವಿಧ ತಳಿಯ ಎತ್ತುಗಳು ಬರುತ್ತಿದ್ದವು. ಆಗ ಬಹುತೇಕ ಕೃಷಿ ಎತ್ತುಗಳಿಂದ ನಡೆಯುತ್ತಿದ್ದರಿಂದ ಅವುಗಳನ್ನು ಕೊಳ್ಳುವುದು ಅನಿವಾರ್ಯವಾಗಿತ್ತು. ಅಲ್ಲದೇ ಅಮರೇಶ್ವರ ಜಾತ್ರೆಯಲ್ಲಿ ಎತ್ತುಗಳನ್ನು ಕೊಂಡುಕೊಂಡು ತರುವುದೇ ಒಂದು ಘನತೆ, ಗೌರವದ ಸಂಗತಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳು ಬಂದಮೇಲೆ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಹಿರಿಯ ರೈತರೊಬ್ಬರು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.