ನಮ್ಮ ಸಿಂಧನೂರು, ಅಕ್ಟೋಬರ್ 04
ಸಿಂಧನೂರು ದಸರಾ ಮಹೋತ್ಸವ ಸುಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಸಾಂಸ್ಕೃತಿಕ ನಗರಿ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯನವರು ಈಡೇರಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಒತ್ತಾಯಿಸಿದ್ದಾರೆ.
ಪ್ರೆಸ್ನೋಟ್
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಸಿಂಧನೂರು ತಾಲೂಕು ಕೇಂದ್ರ ರಾಯಚೂರು ಜಿಲ್ಲಾ ಕೇಂದ್ರದಿಂದ ೮೦ಕ್ಕೂ ಹೆಚ್ಚು ಕಿ.ಮೀ ಅಂತರದಲ್ಲಿದೆ. ಇದರಿಂದ ದೂರದ ಗ್ರಾಮಗಳ ಜನರು ಕೆಲಸ ಕಾರ್ಯಗಳಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸಿಂಧನೂರು ಕೃಷಿ, ವ್ಯಾಪಾರ, ವಹಿವಾಟು, ಶಿಕ್ಷಣ, ಸಾರಿಗೆ, ಸಂಪರ್ಕ, ಆಸ್ಪತ್ರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಪ್ರಮುಖ ಜಿಲ್ಲಾ ಕೇಂದ್ರಗಳು ಸೇರಿದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೂ ವ್ಯಾಪಾರ ವಹಿವಾಟನ್ನು ಹೊಂದಿದೆ. ಹೀಗೆ ಭೌಗೋಳಿಕವಾಗಿ, ಆರ್ಥಿಕವಾಗಿ ಅನುಕೂಲತೆಗಳನ್ನು ಹೊಂದಿರುವ ಸಿಂಧನೂರು ನಗರ ಜಿಲ್ಲಾ ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿದೆ” ಎಂದು ತಿಳಿಸಿದ್ದಾರೆ.
ʼಜಿಲ್ಲಾ ಕೇಂದ್ರವಾದರೆ ಜನಸಾಮಾನ್ಯರಿಗೆ ಅನುಕೂಲʼ
“ಈಗಾಗಲೇ ಸರ್ಕಾರ ಜಿಲ್ಲಾ ಕೋರ್ಟ್ ಸಿಂಧನೂರಿಗೆ ಮಂಜೂರು ಮಾಡಿದ್ದು ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಕೃಷಿ ಮತ್ತು ಆರ್ಟಿಒ ಆಫೀಸ್ನ್ನು ಲಿಂಗಸುಗೂರಿನಿಂದ ಸಿಂಧನೂರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಸಹಾಯಕ ಆಯುಕ್ತರ ಕಾರ್ಯಾಲಯವನ್ನು ಪ್ರಸಕ್ತ ವರ್ಷದಿಂದ ಆರಂಭಿಸಿ, ಸಿಂಧನೂರನ್ನು ನೂತನ ಜಿಲ್ಲೆಯಾಗಿ ಘೋಷಿಸಬೇಕು. ಜಿಲ್ಲಾ ಕೇಂದ್ರವಾಗಿ ಘೋಷಿಸುವುದರಿಂದ ಜಿಲ್ಲಾ ಆಸ್ಪತ್ರೆ, ಡಿಸಿ, ಎಸ್ಪಿ ಕಚೇರಿಗಳು ಸೇರಿದಂತೆ ಸರ್ಕಾರದ ಹಲವು ಕಾರ್ಯಾಲಯಗಳು ಕಾಯನಿರ್ವಹಿಸುವುದರಿಂದ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿಳಂಬ ಮಾಡದೇ ಆದಷ್ಟು ಬೇಗ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ, ಸರ್ಕಾರದಿಂದ ಆದೇಶ ಹೊರಡಿಸಬೇಕು” ಎಂದು ಅವರು ಸಿಎಂ ಅವರನ್ನು ಮನವಿ ಮಾಡಿದ್ದಾರೆ.