ಕೊಪ್ಪಳ ಲೋಕಸಭೆ ಹೊಸ ಲೆಕ್ಕಾಚಾರ: ಸಿಎಂ ಭೇಟಿ ಮಾಡಿದ ಜನಾರ್ಧನ ರೆಡ್ಡಿ !

Spread the love

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 27
ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ, ಈ ನಡುವೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ, ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಭೇಟಿ ಸಂದರ್ಭದಲ್ಲಿ ಸಿಎಂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಜ್.ಎಸ್.ತಂಗಡಗಿ ಅವರೂ ಇದ್ದು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೊಸ ತಂತ್ರಗಾರಿಕೆ ನಡೆಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈ ನಡುವೆ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುವ ಮುಂಚೆಯೇ ಸಿಎಂ, ಡಿಸಿಎಂ ಅವರನ್ನು ಜನಾರ್ದನ ರೆಡ್ಡಿ ಭೇಟಿಯಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಇದು ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಇನ್ನುಳಿದ ೨ರಲ್ಲಿ ಬೇರೆ ಪಕ್ಷದ ಶಾಸಕರಿದ್ದಾರೆ. ಕೊಪ್ಪಳದಲ್ಲಿ ರಾಜಶೇಖರ ಹಿಟ್ನಾಳ್(ಕಾಂಗ್ರೆಸ್), ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ (ಕಾಂಗ್ರೆಸ್) ಕನಕಗಿರಿಯಲ್ಲಿ ಶಿವರಾಜ ತಂಗಡಗಿ (ಕಾಂಗ್ರೆಸ್), ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ (ಕಾಂಗ್ರೆಸ್), ಮಸ್ಕಿಯಲ್ಲಿ ಆರ್.ಬಸನಗೌಡ ತುರ್ವಿಹಾಳ (ಕಾಂಗ್ರೆಸ್), ಸಿರುಗುಪ್ಪದಲ್ಲಿ ಬಿ.ಎಂ.ನಾಗರಾಜ್ (ಕಾಂಗ್ರೆಸ್), ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ (ಕೆಆರ್‌ಪಿಪಿ) ಹಾಗೂ ಕುಷ್ಟಗಿಯಲ್ಲಿ ದೊಡ್ಡನಗೌಡ ಪಾಟೀಲ್ (ಬಿಜಿಪಿ) ಶಾಸಕರಾಗಿದ್ದಾರೆ.
ಕಾಂಗ್ರೆಸ್ ರೆಡ್ಡಿಯನ್ನು ಸೆಳೆಯಲು ಮುಂದಾಯಿತೇ ?
ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಶತಾಯ-ಗತಾಯ ಕೈ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಹಠ ತೊಟ್ಟಿರುವ ಕಾಂಗ್ರೆಸ್ ರಾಜ್ಯ ಮುಖಂಡರು, ಕೆಆರ್‌ಪಿಪಿ ಪಕ್ಷದ ಎಂಎಲ್‌ಎ ಜನಾರ್ದನ ರೆಡ್ಡಿ ಅವರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿ ಚರ್ಚೆಯಾಗುತ್ತಿವೆ. ಜನಾರ್ದನ ರೆಡ್ಡಿ ಮನವಿ ಮೇರೆಗೆ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ಅಲ್ಲದೇ ಅಂಜನಾದ್ರಿ ಸುಕ್ಷೇತ್ರದ ಅಭಿವೃದ್ಧಿಗೆ ೨೦೦ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ ಎನ್ನುವ ಮಾತಿದೆ. ಹೀಗಾಗಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ವಿಶೇಷ ಅನುಕುಂಪ ಹೊಂದಿದ್ದಾರೆನ್ನುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರನ್ನು, ಜನಾರ್ದನ ರೆಡ್ಡಿ ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಬಂದಿದೆ.
ಕೊಪ್ಪಳ ‘ಕೈ’ವಶಕ್ಕೆ ಗೇಮ್ ಪ್ಲಾನ್ !
ಸತತ ಮೂರು ಅವಧಿಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಜಯಶಾಲಿಯಾಗಿದೆ. ಶಿವರಾಮಗೌಡ ಅವರು ಒಂದು ಬಾರಿ ಎಂಪಿಯಾದರೆ, ತದನಂತರ ಸಂಗಣ್ಣ ಕರಡಿ ಅವರು ಸತತ ಎರಡು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಶಿವರಾಮಗೌಡ ಅವರು ಈಗ ಕಾಂಗ್ರೆಸ್‌ನಲ್ಲಿದ್ದು, ಕಾಂಗ್ರೆಸ್‌ನ ಕೆಲವು ಮುಖಂಡರು ಬಿಜೆಪಿಗೆ ಹೋಗಿದ್ದಾರೆ. ಕಳೆದ ಬಾರಿಯೂ ಕಾಂಗ್ರೆಸ್ ಶಾಸಕರ ಪ್ರಾಬಲ್ಯ ಇದ್ದರೂ, ಬಿಜೆಪಿ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು, ಈ ಬಾರಿ ಕ್ಷೇತ್ರ ವ್ಯಾಪ್ತಿಯ ಪಕ್ಷದ ಶಾಸಕರ ಬಲದೊಂದಿಗೆ ಬಾಹ್ಯವಾಗಿ ಕೆಆರ್‌ಪಿಪಿಯ ಶಾಸಕ ಜನಾರ್ದನ ರೆಡ್ಡಿ ಅವರ ಬಾಹ್ಯ ಬೆಂಬಲ ಪಡೆದರೆ, ಕ್ಷೇತ್ರ ಕೈವಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಪಕ್ಷದ ಮುಖಂಡರ ವಿಶ್ವಾಸವಾಗಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದಿದ್ದು, ಲೋಕಸಭೆ ಚುನಾವಣೆಯಲ್ಲಿ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎನ್ನುವುದು ಅವರ ಮಾತಾಗಿದೆ. ಒಂದು ಬಾರಿ ತಾವು ಮತ್ತೊಂದು ಬಾರಿ ತಮ್ಮ ತಂದೆಯವರ ಸೋತ ಅನುಕಂಪ ಹೊಂದಿರುವ ರಾಜಶೇಖರ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಿದರೆ ಈ ಬಾರಿ ವರ್ಕೌಟ್ ಆಗಲಿದೆ, ಗ್ಯಾರಂಟಿಗಳೂ ಪಕ್ಷದ ಅಭ್ಯರ್ಥಿಯನ್ನು ಕೈಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಂದಾಜಿನೊAದಿಗೆ ಕಾಂಗ್ರೆಸ್ ಮುನ್ನೆಜ್ಜೆ ಇಟ್ಟಿದೆ ಎಂದು ಹೆಸರೇಳಲಿಚ್ಚಿಸದ ಪಕ್ಷದ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *