ಕೊಪ್ಪಳ ಲೋಕ ಕಣ : ಪಕ್ಷದಿಂದ ಹೊರಬಂದ ಸಂಗಣ್ಣ ಕರಡಿಯವರು ಜಿದ್ದು ಸಾಧಿಸಿದರೇ ?

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಎಪ್ರಿಲ್ 24

ಕೊಪ್ಪಳ ಲೋಕಸಭೆ ಬಿಜೆಪಿ ಟಿಕೆಟ್ ನಿರಾಕರಣೆಯಿಂದ ಬೇಸರಗೊಂಡು, ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರಿರುವ ಸಂಗಣ್ಣ ಕರಡಿ ಅವರು, ತಮ್ಮನ್ನು ಕಡೆಗಣಿಸಿದ ಬಿಜೆಪಿ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ಜಿದ್ದಿಗೆ ಬಿದ್ದಿದ್ದಾರೆಂದು ಹೇಳಲಾಗುತ್ತಿದ್ದು, ಅದರ ಬೆನ್ನ ಹಿಂದೆಯೇ ಅವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ.
ಎರಡು ಬಾರಿ ಬಿಜೆಪಿಯಿಂದ ಲೋಕಸಭೆಗೆ ಪ್ರವೇಶಿಸಿ ಹಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ಹೈಕಮಾಂಡ್ ಟಿಕೆಟ್ ನೀಡದ ಕಾರಣ ಮುನಿಸಿಕೊಂಡು, ಕೊನೆಗೆ ಹೈಕಮಾಂಡ್‌ನ ಮನವೊಲಿಕೆಯನ್ನೂ ಧಿಕ್ಕರಿಸಿ ಕಾಂಗ್ರೆಸ್ ಪಾಳಯಕ್ಕೆ ಧುಮುಕಿರುವುದು ಬಿಜೆಪಿ ವಲಯದಲ್ಲಿ ಸಂಚಲವನ್ನು ಸೃಷ್ಟಿಸಿರುವುದಂತೂ ನಿಜ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು, ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರ ಬಳಗವನ್ನು ಹೊಂದಿರುವ ಕರಡಿ ಅವರು ಕಾಂಗ್ರೆಸ್ ಸೇರಿದಂದಿನಿAದ ಬಿಜೆಪಿಗೆ ಟಾಂಟ್ ನೀಡುತ್ತಿದ್ದಾರೆಂದೇ ಹೇಳಲಾಗುತ್ತಿದೆ.
ರೆಡ್ಡಿ ಹೇಳಿಕೆ ಗಂಭೀರವಾಗಿ ಪರಿಗಣಿಸಿದರೇ ?
ಇತ್ತೀಚೆಗೆ ಗಂಗಾವತಿ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಅವರು, ಸಂಗಣ್ಣ ಕರಡಿ ಅವರು ಪಕ್ಷ ಬಿಟ್ಟಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಿದ್ದಾರೆಂದು ಹೇಳಲಾಗುತ್ತಿದ್ದು, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸಲು, ಬಿಜೆಪಿಯಲ್ಲಿರುವ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿ ಬಳಗವನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ನಿದರ್ಶನವೆನ್ನುವಂತೆ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರಮುಖ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ದೊಡ್ಡಪ್ಪ ಕಡಬೂರು, ಬಸಪ್ಪ ಬ್ಯಾಳಿ, ಪುರಸಭೆ ಮಾಜಿ ಸದಸ್ಯ ಎಂ.ಅಮರೇಶ, ಶ್ರೀಶೈಲಪ್ಪ ಸಜ್ಜನ್ ಸೇರಿದಂತೆ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದೇ ಸಾಕ್ಷಿ ಎಂದು ತಿಳಿದುಬಂದಿದೆ.
ಕಾಂಗ್ರೆಸ್‌ನತ್ತ ಸಂಗಣ್ಣ ಕರಡಿಯವರ ಬೆಂಬಲಿಗರು, ಅಭಿಮಾನಿಗಳು
ತಮ್ಮ ನಾಯಕ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದನ್ನು ಖಂಡಿಸಿ ಮಾರ್ಚ್ 24ರಂದು ಕೊಪ್ಪಳದಲ್ಲಿ ಸಭೆ ನಡೆಸಿದ್ದ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳು ಇನ್ನೇನು ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ದಂಡು ದಂಡಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಹಾಲಿ ಎಮ್ಮೆಲ್ಲೆ ಕೆ.ರಾಘವೇಂದ್ರ ಹಿಟ್ನಾಳ್ ಅವರೊಂದಿಗೆ ಸಂಗಣ್ಣ ಕರಡಿ ಹಾಗೂ ಅವರ ಪುತ್ರ ಅಮರೇಶ ಕರಡಿ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *