ನಮ್ಮ ಸಿಂಧನೂರು, ಏಪ್ರಿಲ್ 1
ಹೈಕಮಾಂಡ್ ಟಿಕೆಟ್ ನಿರಾಕರಣೆಯ ನಂತರ, ಮಾರ್ಚ್ 21ರಂದು ಕೊಪ್ಪಳದಲ್ಲಿ ನಡೆದ ಬೆಂಬಲಿಗರ ಸಭೆಯ ಬಳಿಕ ಮೌನಕ್ಕೆ ಶರಣಾಗಿದ್ದ ಹಾಲಿ ಸಂಸದರಾದ ಸಂಗಣ್ಣ ಕರಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪುನಃ ಆ್ಯಕ್ಟೀವ್ ಆಗಿದ್ದು, ಪದ್ಮಭೂಷಣ, ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಗೆ “ತ್ರಿವಿಧ ದಾಸೋಹಿ, ಕಾಯಕಯೋಗಿ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಕೋಟಿ ಪ್ರಣಾಮಗಳು” ಎನ್ನುವ ಪೋಸ್ಟ್ ಅನ್ನು ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಶ್ರೀಗಳನ್ನು ಸ್ಮರಿಸಿದ್ದಾರೆ. ಮಾರ್ಚ್ 21ರಂದು ಕೊಪ್ಪಳದಲ್ಲಿ ನಡೆದ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯಲ್ಲಿ ತಮಗೆ ಟಿಕೆಟ್ ಕಟ್ ಆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ತದನಂತರ ಮೌನಕ್ಕೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಹಾಲಿ ಸಂಸದರನ್ನು ಪಕ್ಷದ ಹೈಕಮಾಂಡ್ ಮನವೊಲಿಸಲು ಮುಂದಾಗಿತ್ತು. ಸಂಗಣ್ಣ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಮುಂಬರುವ ದಿನಗಳಲ್ಲಿ ಸ್ಥಾನಮಾನದ ಭರವಸೆ ನೀಡುವುದರ ಮೂಲಕ ಮುನಿಸು ಶಮನಗೊಳಿಸಿದ್ದಾರೆಂದು ಹೇಳಲಾಗುತ್ತಿದೆ.