Spread the love

(ಪೊಲಿಟಿಕಲ್ ಅನಾಲಿಸಿಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 7
ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಉಭಯ ಪಕ್ಷಗಳ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿಂಧನೂರು ಹೊರತುಪಡಿಸಿ ಕಾಂಗ್ರೆಸ್ ಶಾಸಕರಿರುವ ಎಲ್ಲ ಕಡೆಯೂ ಬಿಜೆಪಿಗೆ ಕಡಿಮೆ ಮತಗಳು ಬಂದಿದ್ದು, ಆದರೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ೫ ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿಗೆ ಲೀಡಾಗಿರುವುದು ಹೊಸ ಲೆಕ್ಕಾಚಾರದ ಗುಟ್ಟೇನು ಎನ್ನುವಂತಾಗಿದೆ.
ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿದ ಮತದಾರ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯತ್ತ ವಾಲಿರುವುದು ವಿಶೇಷವಾಗಿದ್ದು, ಇದಕ್ಕೆ ಜಾತಿ ಲೆಕ್ಕಾಚಾರ ಕಾರಣ ಇರಬಹುದೆನ್ನುವ ಮಾತುಗಳು ಕೇಳಿಬರುತ್ತಿವೆ. ಅಂತು ಇಂತೂ ಸತತ ಹ್ಯಾಟ್ರಿಕ್ ಸೋಲಿನ ನಡುವೆ ಹತಾಶೆಗೊಂಡಿದ್ದ, ಕಾಂಗ್ರೆಸ್ ಈ ಬಾರಿ ಕೊಪ್ಪಳ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 73,645 (41.98%) ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಪರ 51703 (29.47%) ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯನ್ನು 21,942 ಮತಗಳ ಅಂತರದಿAದ ಸೋಲಿಸಿದ್ದರು. ಈ ನಡುವೆ ಜೆಡಿಎಸ್ ಅಭ್ಯರ್ಥಿಗೆ 43,461 (24.77) ಮತಗಳು ದೊರಕಿದ್ದವು.
ಜೆಡಿಎಸ್, ಬಿಜೆಪಿಗೆ ಪ್ಲಸ್ಸು, ಕಾಂಗ್ರೆಸ್‌ಗೆ ಮೈನಸ್ಸು
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ವರವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೊಪ್ಪಳ ಲೋಕಸಭಾ ಕ್ಷೇತ್ರ ಅದರಲ್ಲೂ ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಫಲಪ್ರದವಾಗಿದ್ದು, ಈ ಎರಡು ಪಕ್ಷಗಳು ಜಂಟಿಯಾಗಿ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ ಕಾರಣ ಕಾಂಗ್ರೆಸ್‌ಗಿಂತ ಬಿಜೆಪಿ ಅಭ್ಯರ್ಥಿಗೆ ಲೀಡು ಜಾಸ್ತಿಯಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಗೆ 6,63,511 (49.93) ವೋಟ್
2024ನೇ ಸಾಲಿನ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರ 6,63,511 (49.93) ಮತಗಳು ಚಲಾವಣೆಯಾದರೆ, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ವಿರುದ್ಧ ಪರ 6,17,154 (46.44) ಮತಗಳು ಚಲಾವಣೆಯಾಗಿವೆ. 46357 ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿನ ಕೈ, ಕಮಲ ಬಲಾಬಲ
ಕೊಪ್ಪಳ ಲೋಕಸಭಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಒಟ್ಟುಗೂಡಿಸಿ ಲೋಕಸಭಾ ಕ್ಷೇತ್ರ ರಚಿಸಲಾಗಿದೆ. ಮಸ್ಕಿ, ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿದ್ದರೆ, ಕನಕಗಿರಿ ವಿಧಾನಸಭಾ ಕ್ಷೇತ್ರ ಎಸ್ಸಿಗೆ ಮೀಸಲಾಗಿದೆ. ಉಳಿದ 6 ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ಕೇತ್ರಗಳಾಗಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್, ಯಲಬುರ್ಗಾದಲ್ಲಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ಗಂಗಾವತಿಯಲ್ಲಿ ಕೆಆರ್‌ಪಿಪಿಯ ಜನಾರ್ದನ ರೆಡ್ಡಿ, ಕನಕಗಿರಿಯಲ್ಲಿ ಕಾಂಗ್ರೆಸ್‌ನ ಶಿವರಾಜ ತಂಗಡಗಿ, ಕುಷ್ಟಗಿಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್, ಸಿಂಧನೂರಿನಲ್ಲಿ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ, ಮಸ್ಕಿಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರ್ವಿಹಾಳ, ಸಿರುಗುಪ್ಪದಲ್ಲಿ ಕಾಂಗ್ರೆಸ್‌ನ ಬಿ.ಎಂ.ನಾಗರಾಜ ಗೆಲುವು ಸಾಧಿಸಿದ್ದಾರೆ. ಒಂದು ರೀತಿ ಕೊಪ್ಪಳ ಲೋಕಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಬಲಾ ಬಲ ಲೆಕ್ಕಹಾಕಿದರೆ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಹೆಚ್ಚು ಗೆಲುವು ಪಡೆದಿದ್ದಾರೆ. ೮ ಕ್ಷೇತ್ರಗಳಲ್ಲಿ ೬ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ, ಗಂಗಾವತಿ ಹಾಗೂ ಕುಷ್ಟಗಿ ಕ್ಷೇತ್ರಗಳಲ್ಲಿ ಕ್ರಮವಾಗಿ ಕೆಆರ್‌ಪಿಪಿ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿನ ವೋಟ್ ಶೇರಿಂಗ್ ಪ್ರಮಾಣ ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಿಗಿಂತ ಉತ್ತಮ ವೋಟ್ ಶೇರಿಂಗ್ ಪಡೆದುಕೊಂಡಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು ಸೇರಿ 6,76,213 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿಗಳು 4,88,979 ವೋಟ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಟ್ಟು ಮತಗಳ ಅಂತರ 1,87,234 ಆಗಿತ್ತು.
ಮುಂಬರುವ ಎಲೆಕ್ಷನ್‌ನಲ್ಲಿ ಹೊಸ ಲೆಕ್ಕಾಚಾರ ?
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳ ಕಾಂಬಿನೇಶನ್ ಯಶಸ್ವಿಯಾಗಿರುವ ಬಗ್ಗೆ ಮುಂಬರುವ ದಿನಗಳ ಚುನಾವಣೆಯಲ್ಲಿ ಹೊಸ ಲೆಕ್ಕಾಚಾರ ತೆರೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಇನ್ನಿಲ್ಲದ ಪೈಪೋಟಿ ನಡೆಯುವುದಂತೂ ಗ್ಯಾರಂಟಿ, ಈ ಎರಡೂ ಪಕ್ಷಗಳ ಮತಗಳು ಒಗ್ಗೂಡುವುದರಿಂದ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಹೇಳಲಾಗುತ್ತಿದ್ದು, ಅಲ್ಲಿಯವರೆಗೆ ಮೈತ್ರಿ ಮುಂದುವರಿಯುತ್ತದೆಯೋ ? ಅಷ್ಟರೊಳಗೆ ಏನೆಲ್ಲಾ ರಾಜಕೀಯ ಸ್ಥಿತ್ಯಂತರ ಜರುಗುವವೋ ಎಂಬುದು ಹಲವರ ಮಾತಾಗಿದೆ.


Spread the love

Leave a Reply

Your email address will not be published. Required fields are marked *