ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಫೆಬ್ರವರಿ 26
ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆಹಾಕಿ ಕಳೆದ 3 ಅವಧಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು ಹ್ಯಾಟ್ರಿಕ್ ಸಾಧಿಸಿರುವ ಬಿಜೆಪಿ, ಈ ಬಾರಿ ಪುನಃ ಗೆಲ್ಲುವ ತವಕ ಹೊಂದಿದ್ದರೆ, ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 6ರಲ್ಲಿ ವಿಜಯಶಾಲಿಯಾಗಿ ಬಲ ಹೆಚ್ಚಿಸಿಕೊಂಡು ಬೀಗುತ್ತಿರುವ ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಶತಾಯ-ಗತಾಯ ಪ್ರಯತ್ನ ನಡೆಸಿದೆ. ಕೊಪ್ಪಳ, ಯಲಬುರ್ಗಾ, ಕನಕಗಿರಿ, ಸಿಂಧನೂರು, ಸಿರುಗುಪ್ಪ, ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ವಿಧಾನಸಭಾ ಸದಸ್ಯರಿದ್ದರೆ, ಗಂಗಾವತಿಯಲ್ಲಿ ಕೆಆರ್‌ಪಿಪಿ, ಕುಷ್ಟಗಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ವಿಧಾನಸಭಾ ಕ್ಷೇತ್ರಗಳಲ್ಲಿನ ಬಲಾಬಲ ಲೆಕ್ಕಹಾಕಿದರೆ ಕಾಂಗ್ರೆಸ್ ಶಕ್ತಿ ಹೆಚ್ಚಿದೆ, ಆದರೆ ಉಳಿದ ಅಂಶಗಳನ್ನು ಪರಿಗಣಿಸಿದರೆ ಫಲಿತಾಂಶ ಬೇರೆಯೇ ಆಗಲಿದೆ ಎನ್ನುವ ಚರ್ಚೆಗಳಿವೆ. ಬಿಜೆಪಿಯಲ್ಲಿ ಸಂಗಣ್ಣ ಕರಡಿಯವರಿಗೆ ಪುನಃ ಟಿಕೆಟ್ ಗ್ಯಾರಂಟಿ ಎಂದು ಹೇಳಲಾಗುತ್ತಿದ್ದು, ಈ ನಡುವೆಯೂ ಇತರರಿಂದ ಪೈಪೋಟಿ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ವಲಯದಲ್ಲಿಯೂ ಸಮರ್ಥ ಅಭ್ಯರ್ಥಿಯ ಹುಡುಕಾಟ ಮುಂದುವರಿದಿದ್ದು ಯಾರಿಗೆ ಟಿಕೆಟ್ ಕೊಟ್ಟರೇ ಬೇಸು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಹೆಸರೇಳಲಿಚ್ಛಿಸದ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಯಾವ್ಯಾವ ತಾಲೂಕು ?
ಕೊಪ್ಪಳ ಲೋಕಸಭಾ ಸಾಮಾನ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸೇರಿ ಲೋಕಸಭಾ ಕ್ಷೇತ್ರ ರಚಿತವಾಗಿದೆ. ಮಸ್ಕಿ, ಸಿರುಗುಪ್ಪ ಎಸ್ಟಿಗೆ ಮೀಸಲಾಗಿದ್ದರೆ, ಕನಕಗಿರಿ ವಿಧಾನಸಭಾ ಕ್ಷೇತ್ರ ಎಸ್ಸಿಗೆ ಮೀಸಲಾಗಿದೆ. ಉಳಿದ 5 ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ.
2019ರ ಚುನಾವಣೆಯಲ್ಲಿ ಕೊಪ್ಪಳ ಕಮಲದ ಪಾಲು
ಕಳೆದ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಗಣ್ಣ ಕರಡಿ, ಕಾಂಗ್ರೆಸ್‌ನಿಂದ ರಾಜಶೇಖರ ಇಟ್ನಾಳ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಪ್ರಧಾನಿ ಮೋದಿಯವರು ಕೊಪ್ಪಳಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ 5,86,783 ಮತಗಳು ಬಂದರೆ, ರಾಜಶೇಖರ ಹಿಟ್ನಾಳ್ ಅವರಿಗೆ 5,48,386 ಮತಗಳು ಬಂದಿದ್ದವು. ಹಾಗಾಗಿ ಬಿಜೆಪಿಯ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ನ ಹಿಟ್ನಾಳ್ ಅವರನ್ನು 38,397 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಸಮುದಾಯ (ಜಾತಿ) ಲೆಕ್ಕಾಚಾರ:
ಕೊಪ್ಪಳ ಲೋಕಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದರೂ ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರವೇ ವಿಚಿತ್ರವಾಗಿದೆ. ಲಿಂಗಾಯತ ಸಮುದಾಯದ ಪಾರಮ್ಯ ಈ ಕ್ಷೇತ್ರದಲ್ಲಿ ಬಹಳ ದಿನಗಳಿಂದಲೂ ಎದ್ದು ಕಾಣುತ್ತದೆ. ಈವರೆಗೆ ಲಿಂಗಾಯತ, ಈಡಿಗ ಹಾಗೂ ಕುರುಬ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗಿ ಆಡಳಿತ ನಡೆಸಿದ್ದಿದೆ. ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಕೊಪ್ಪಳ ಕಳೆದ ಮೂರು ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕೆ.ವಿರೂಪಾಕ್ಷಪ್ಪ ಅವರೇ ಕಾಂಗ್ರೆಸ್‌ನ ಕೊನೆಯ ಎಂಪಿ ಆಗಿದ್ದು, ಕಳೆದ 3 ಅವಧಿಯಲ್ಲಿ ಬಿಜೆಪಿಯಿಂದ ಒಂದು ಬಾರಿ ಶಿವರಾಮಗೌಡ, ಎರಡು ಅವಧಿಯಲ್ಲಿ ಸಂಗಣ್ಣ ಕರಡಿ ಅವರು ಲೋಕಸಭೆ ಮೆಟ್ಟಿಲು ಹತ್ತಿದ್ದಾರೆ. ಯಾವುದೇ ರಾಷ್ಟ್ರೀಯ ಪಕ್ಷಗಳು ಇಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕುವುದು ವಾಡಿಕೆ, ಲಿಂಗಾಯತ ಮತ್ತು ಕುರುಬ ಸಮುದಾಯದವರು ಪರಸ್ಪರ ಆಯಾ ಪಕ್ಷಗಳಿಂದ ಪ್ರತಿಸ್ಪರ್ಧಿಗಳಾದಲ್ಲಿ ಒಂದು ತೆರನಾದ ತಿರುವು ಪಡೆದುಕೊಳ್ಳುವ ಚುನಾವಣೆ, ಒಂದು ವೇಳೆ ಲಿಂಗಾಯತ ಸಮುಯದಾಯದ ಅಭ್ಯರ್ಥಿಗಳೇ ಪರಸ್ಪರ ಪ್ರತಿಸ್ಪರ್ಧಿಗಳಾದಲ್ಲಿ ಲಿಂಗಾಯತ ಸಮುದಾಯದ ಒಳಪಂಗಡ ಮುಂಚೂಣಿಗೆ ಬಂದು ಮತ್ತೊಂದು ತಿರುವು ಪಡೆದುಕೊಂಡಿರುವುದು ಈ ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.
1991ರ ಕೊಪ್ಪಳ ಲೋಕಸಭಾ ಚುನಾವಣೆ ವಿಶೇಷ: ಸಿದ್ದರಾಮಯ್ಯ / ಬಸವರಾಜ ಪಾಟೀಲ್ ಹಣಾಹಣಿ
ರಾಜ್ಯದ ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು 1991ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದು ವಿಶೇಷವಾಗಿದೆ. ಅಂದು ಕಾಂಗ್ರೆಸ್‌ನಿಂದ ಅನ್ವರಿ ಬಸವರಾಜ ಪಾಟೀಲ್ ಹಾಗೂ ಜನತಾ ದಳದಿಂದ ಸಿದ್ದರಾಮಯ್ಯ ಅವರು ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದರು. ದಕ್ಷಿಣ ಕರ್ನಾಟಕ ಭಾಗದ ನಾಯಕ ಉತ್ತರ ಕರ್ನಾಟಕ ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಿಲ್ಲೆಯಲ್ಲಿ ಚುನಾವಣಾ ಅಖಾಡಕ್ಕಿಳಿದಿದ್ದು ಭಾರಿ ಸಂಚಲನ ಸೃಷ್ಟಿಸಿತ್ತು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಿಂದ ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದು ಈಗ ಇತಿಹಾಸವಾಗಿದೆ.
(ಮುಂದುವರಿಯುವುದು.. ನಾಳೆ ಕ್ಷೇತ್ರವಾರು ಮತಗಳೊಂದಿಗೆ ವಿಶ್ಲೇಷಣೆ )