ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 5
2024ರ ಲೋಕಸಭಾ ಕ್ಷೇತ್ರದ ಚುನಾವಣೆ ಸಮೀಪಿಸಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಈ ಬಾರಿ ಕಾಂಗ್ರೆಸ್‌ನೊಂದಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವ ಆಗಿಲ್ಲ. ಈ ಹಿಂದೆ ಕಾಂಗ್ರೆಸ್‌ನಿಂದ ಲೋಕಸಭಾ ಸದಸ್ಯರಾಗಿದ್ದ ಸಿಂಧನೂರಿನ ಕೆ.ವಿರೂಪಾಕ್ಷಪ್ಪನವರ ಅವಧಿ ಮುಗಿದ ನಂತರ, 2009ರಲ್ಲಿ ಗಂಗಾವತಿಯ ಶಿವರಾಮಗೌಡ ಅವರು ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಲೋಕಸಭೆ ಮೆಟ್ಟಿಲು ಹತ್ತಿದ್ದರು. ತದನಂತರ 2014 ಹಾಗೂ 2019ರಲ್ಲಿ ಸಂಗಣ್ಣ ಕರಡಿಯವರು ಬಿಜೆಪಿಯಿಂದ ಸ್ಪರ್ಧಿಸಿ ಎರಡು ಬಾರಿ ಜಯಶಾಲಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಬಾರಿಸಿದೆ.
ಬಿಜೆಪಿ, ಜೆಡಿಎಸ್ ಮೈತ್ರಿ:
ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಲೋಕಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್‌ನ ಪಾತ್ರವನ್ನು ಅಲ್ಲಗಳೆಯುವ ಹಾಗಿಲ್ಲ, ಜೆಡಿಎಸ್‌ಗೆ ಅದರದ್ದೇ ವೋಟ್ ಬ್ಯಾಂಕ್ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಹುತೇಕ ಸಲ ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಹಾಕಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವರಾಮಗೌಡ, ಕಾಂಗ್ರೆಸ್‌ನಿಂದ ಬಸವರಾಜ ರಾಯರೆಡ್ಡಿ ಹಾಗೂ ಜೆಡಿಎಸ್‌ನಿಂದ ಇಕ್ಬಾಲ್ ಅನ್ಸಾರಿಯವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಆಗ ಜೆಡಿಎಸ್‌ನ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅನ್ಸಾರಿ ಅವರು 1 ಲಕ್ಷ 80 ಸಾವಿರಕ್ಕೂ ಹೆಚ್ಚು ವೋಟುಗಳನ್ನು ಗಳಿಸಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಕ್ಬಾಲ್ ಅನ್ಸಾರಿಯವರು ಹಾಗೂ ಮಾಜಿ ಸಂಸದ ಶಿವರಾಮಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಈಗ ಇತಿಹಾಸವಾಗಿದೆ.
ಟಿಕೆಟ್‌ಗಾಗಿ ಪೈಪೋಟಿ :
ಕೊಪ್ಪಳ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಶಾಸಕರ ಪ್ರಾಬಲ್ಯವಿದ್ದರೂ, ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ತಮ್ಮದೇ ಆದ ಲಾಬಿಯನ್ನು ಮುಂದುವರಿಸಿದ್ದು, ಪಕ್ಷದ ಪ್ರಮುಖರ ಮೂಲಕ ಹೈಕಮಾಂಡ್ ಮೇಲೆ ಈಗಿನಿಂದಲೇ ಒತ್ತಡ ಹಾಕುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಒಂದು ತೆರನಾಗಿ ಆಲೋಚಿಸುವ ಮತದಾರ, ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ತೆರನಾಗಿ ತೀರ್ಮಾನ ತೆಗೆದುಕೊಳ್ಳುವುದೇ ಈ ಕ್ಷೇತ್ರದ ವಿಶೇಷತೆಯಾಗಿದ್ದು, ಹಾಗಾಗಿ ಟಿಕೆಟ್‌ಗಾಗಿ ಭಾರಿ ಪೈಪೋಟಿಯೇ ಇದೆ.
ಸಂಗಣ್ಣ ಕರಡಿ, ಡಾ.ಬಸವರಾಜ ಕೆ.ಶರಣಪ್ಪ, ವೆಂಕಟರಾವ್ ನಾಡಗೌಡ :
ಬಿಜೆಪಿಯಿಂದ ಸ್ಪರ್ಧಿಸಿ ಎರಡು ಬಾರಿ ಗೆಲುವು ಸಾಧಿಸಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆಪ್ತ ವಲಯದಲ್ಲಿದ್ದು, ಟಿಕೆಟ್ ಅವರಿಗೆ ಫಿಕ್ಸ್ ಎಂದು ಹೇಳಲಾಗುತ್ತಿದೆ. ಇನ್ನೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅದಲು ಬದಲಾಗುತ್ತದೆ ಎನ್ನುವ ಮಾತುಗಳು ಚಾಲ್ತಿಗೆ ಬಂದ ನಂತರ ಪುನಃ ಪಕ್ಷದ ಹೈಕಮಾಂಡ್ ಮತ್ತು ಮುಖಂಡರು ಸಂಗಣ್ಣ ಕರಡಿ ಅವರ ಕುಟುಂಬಕ್ಕೆ ಮಣೆ ಹಾಕಿದ್ದರು. ಹಾಗಾಗಿ ಈ ಬಾರಿಯೂ ಸಂಗಣ್ಣ ಅವರಿಗೆ ಟಿಕೆಟ್ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಜೆಪಿಯ ರಾಜ್ಯ ಕಾರ್ಯಕಾರಣಿ ಸದಸ್ಯ ಹಾಗೂ ವೈದ್ಯ ಡಾ.ಬಸವರಾಜ ಕೆ.ಶರಣಪ್ಪ ಅವರು ಕಳೆದ ಹಲವು ದಿನಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಚುರುಕಿನಿಂದ ಓಡಾಡುತ್ತಿದ್ದು, ಬಿಜೆಪಿಯ ಸಭೆ, ಸಮಾರಂಭ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ಶುಭ ಕೋರುವ ಬ್ಯಾನರ್‌ಗಳು ಅಲ್ಲಲ್ಲಿ ಕಂಡುಬರುತ್ತಿವೆ. ಇವರು ಸಹ ಪಕ್ಷದ ಹೈಕಮಾಂಡ್, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದಾರೆನ್ನುವ ಚರ್ಚೆಗಳಿವೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಜೆಡಿಎಸ್‌ನ ರಾಜ್ಯ ಹಿರಿಯ ಮುಖಂಡ ವೆಂಕಟರಾವ್ ನಾಡಗೌಡ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆನ್ನುವ ಮಾತುಗಳು ರಾಜಕೀಯ ವಲಯದಲ್ಲಿ ವೇಗ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ವೆಂಕಟರಾವ್ ನಾಡಗೌಡ ಅವರು ಕೊಪ್ಪಳ ಕ್ಷೇತ್ರದ ವಿವಿಧ ತಾಲೂಕು ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನಿಂದ ತೊಡಗಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.