ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 10
ಜಮ್ಮುಕಾಶ್ಮೀರದ ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ತಂಡ ಬಹುಮಾನ ಗಳಿಸಿದೆ. ನೃತ್ಯ ಸ್ಪರ್ಧೆಯಲ್ಲಿ ಯಕ್ಷಗಾನ ಕಲೆಯನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿನಿಯರು ಗಮನ ಸೆಳೆದಿದ್ದಾರೆ.
ನಗರದ ಪಾಟೀಲ್ ಶಿಕ್ಷಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಈ ತಂಡದಲ್ಲಿದ್ದರು. ಜನವರಿ 3ರಿಂದ 9ನೇ ತಾರೀಖಿನವರೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ದೇಶದ 20 ರಾಜ್ಯಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಕುರಿತು ಸುದ್ದಿಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಹಾಗೂ ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಅವರು, ಜಮ್ಮುವಿನ ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ನಮ್ಮ ಸಂಸ್ಥೆಯಿಂದ ಶ್ವೇತಾ ಮೇಟಿ, ಪ್ರತೀಕ್ಷಾ, ಉಮಾಭಾರತಿ, ದೀಪ್ತಿ.ಪಿಎಂ ಭಾಗವಹಿಸಿದ್ದರು. ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ರಾಜೇಶ್ವರಿ, ಮನುಪ್ರಿಯಾ ಸೇರಿದಂತೆ ರಾಜ್ಯದಿಂದ ಒಟ್ಟು 10 ವಿದ್ಯಾರ್ಥಿನಿಯರು ತಂಡದಲ್ಲಿದ್ದರು. ನೃತ್ಯ ಸ್ಪರ್ಧೆಯಲ್ಲಿ ಪ್ರತಿಭೆ ಮೆರೆದ ರಾಜ್ಯದ ತಂಡಕ್ಕೆ ಜಮ್ಮು ಕಾಶ್ಮೀರ ಸಿಎಂ ಅವರು ಬಹುಮಾನ, ಪಾರಿತೋಷಕ ನೀಡಿ ಅಭಿನಂದಿಸಿದ್ದಾರೆ” ಎಂದು ತಿಳಿಸಿದ್ದಾರೆ.