ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು.ಜ.28
ಸಿಂಧನೂರು ಪಟ್ಟಣದ ರಾಜ್ಯ ಹೆದ್ದಾರಿಯ ಒತ್ತುವರಿಯಾದ ಸ್ಥಳ ತೆರವು ಕುರಿತಂತೆ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಮತ್ತು ಕಂದಾಯ ಸದಸ್ಯ ಎಸ್. ಪಾಲಯ್ಯ ರವರನ್ನು ಒಳಗೊಂಡ ವಿಶೇಷ ನ್ಯಾಯಾಲಯ ರಾಯಚೂರು ಜಿಲ್ಲಾ ಆಡಳಿತವನ್ನು ತಮ್ಮ ಆದೇಶದಲ್ಲಿ ಶ್ಲಾಘಿಸಿದ್ದಾರೆ.
ನ್ಯಾಯಾಲಯದ ವರದಿಯಲ್ಲಿ ಏನಿದೆ ?
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ರಾಜ್ಯ ಹೆದ್ದಾರಿ-30 ರಲ್ಲಿನ ಮತ್ತು ರಾಷ್ಟ್ರೀಯ ಹೆದ್ದಾರಿ-150-ಎ ರಲ್ಲಿನ ರಸ್ತೆ ಬದಿ ಒತ್ತುವರಿ ಮಾಡಿ ಅನಧಿಕೃತ ಶೆಡ್ಡು ಮತ್ತು ಡಾಬಾಗಳನ್ನು ಹಾಕಿಕೊಂಡಿರುವ ಬಗ್ಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಸಿಂಧನೂರು ಗ್ರಾಮಸ್ಥರು ಸಲ್ಲಿಸಿದ ಮನವಿಯ ಮೇರೆಗೆ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವಯಂಪ್ರೇರಿತ ಪ್ರಕರಣವಾಗಿ ಮಾರ್ಪಡಿಸಿ ಎಲ್.ಜಿ.ಸಿ.(ಎಸ್) 316/2014 ರಂತೆ ನೋಂದಾಯಿಸಿ, ಜಿಲ್ಲಾಧಿಕಾರಿಗಳು, ರಾಯಚೂರು, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ, ವಿಜಯಪುರ. ಸಹಾಯಕ ಕಾರ್ಯಪಾಲಕ ಅಭಿಯಂತರರು. ರಾಷ್ಟ್ರೀಯ ಹೆದ್ದಾರಿ, ಹುನಗುಂದ, ಸಹಾಯಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ, ಸಿಂಧನೂರು, ಪೌರಾಯುಕ್ತರು, ಸಿಂಧನೂರು, ಕಾರ್ಯನಿರ್ವಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ರಾಯಚೂರು, ಸಿಂಧನೂರು ಪೊಲೀಸ್ ರವರುಗಳಿಗೆ ನೋಟೀಸನ್ನು ನೀಡಲಾಗಿತ್ತು.
ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಸಂಖ್ಯೆ: 15412/2008 ರ ದಿನಾಂಕ 05.03.2009ರ ಆದೇಶದ ಪ್ರಕಾರ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವು ಮಾಡಲು ಆದೇಶಿಸಲಾಗಿತ್ತು. ಸದರಿ ಆದೇಶವಿದ್ದರೂ ಸಹ ಅಧಿಕಾರಿಗಳು ಒತ್ತುವರಿಯನ್ನು ತೆರೆವುಗೊಳಿಸಿರಲಿಲ್ಲ. ನೋಟೀಸ್ ನೀಡಿದ ನಂತರ ಜಿಲ್ಲಾಢಳಿತ ಮತ್ತು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಸಿಂಧನೂರು-ಗಂಗಾವತಿ, ಸಿಂಧನೂರು- ಕುಷ್ಟಗಿ ಮುಖ್ಯ ರಸ್ತೆ, ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ, ಸಿಂಧನೂರು-ಮಸ್ಕಿ ಮುಖ್ಯ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಫುಟ್ ಫಾತ್ ಮೇಲೆ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅಂಗಡಿ, ಮುಂಗಟ್ಟು ಹಾಗೂ ಶೆಡ್‌ಗಳನ್ನು ತೆರೆವುಗೊಳಿಸಿ ಸುಮಾರು 2,50,000 ಚದರ ಅಡಿಗಳಷ್ಟು ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಅದು ಅಲ್ಲದೇ, ನಗರದ ಇತರ 5 ಎಕರೆ ಅನಧೀಕೃತ ಒತ್ತುವರಿಯಾದ ಜಮೀನನ್ನು ತೆರವುಗೊಳಿಸಿರುವುದರಿಂದ ಅಂದಾಜು ರೂ. 120 ಕೋಟಿಗಳಷ್ಟು ಮೊತ್ತದ ಸರ್ಕಾರಿ ಜಮೀನು ಸರ್ಕಾರದ ಸುಪರ್ದಿಗೆ ಬಂದಿರುತ್ತದೆ.
ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಿರುವುದರ ಬಗ್ಗೆ ಸಿಂಧನೂರು ನಗರಸಭೆಯ ಆಯುಕ್ತರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಸರ್ಕಾರಿ ಜಮೀನನ್ನು ಉಳಿಸುವಲ್ಲಿ ರಾಯಚೂರು ಜಿಲ್ಲಾ ಆಡಳಿತವು ಉತ್ತಮ ಕಾರ್ಯವನ್ನು ಮಾಡಿರುತ್ತದೆ. ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಒತ್ತುವರಿ ಮಾಡಿದ ಒತ್ತುವರಿದಾರರನ್ನು ತೆರೆವುಗೋಳಿಸಲು ಸೂಕ್ತ ಕ್ರಮವಹಿಸಿದ ಜಿಲ್ಲಾಧಿಕಾರಿಗಳು ರಾಯಚೂರು, ಪೊಲೀಸ್ ವರಿಷ್ಠಾಧಿಕಾರಿಗಳು, ರಾಯಚೂರು, ಆಯುಕ್ತರು, ಸಿಂಧನೂರು ನಗರ ಪಾಲಿಕೆ, ತಹಶೀಲ್ದಾರ್ ಸಿಂಧನೂರು, ಲೋಕೊಪಯೋಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ತೆರವುಗೊಳಿಸಲು ಸಹಕಾರ ನೀಡಿದ ಇತರೆ ಎಲ್ಲಾ ಅಧಿಕಾರಿಗಳನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಗೌರವಾನ್ವಿತ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಮತ್ತು ಕಂದಾಯ ಸದಸ್ಯರಾದ ಶ್ರೀ ಎಸ್. ಪಾಲಯ್ಯರವರನ್ನು ಒಳಗೊಂಡ ವಿಶೇಷ ನ್ಯಾಯಾಲಯವು ತಮ್ಮ ಆದೇಶದಲ್ಲಿ ಶ್ಲಾಘಿಸಿರುತ್ತದೆ” ಎಂದು ವರದಿಯಲ್ಲಿದೆ.