ಕೊಪ್ಪಳ ಲೋಕಸಭೆ ಕ್ಷೇತ್ರದ ವಿಧಾನಸಭೆಗಳ ವ್ಯಾಪ್ತಿಯಲ್ಲಿ ಕೈ‘ಬಲ’

Spread the love

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 15
2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಈ ಬಾರಿ ಕೊಪ್ಪಳ ಲೋಕಸಭೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ತಂತ್ರಗಾರಿಕೆಗೆ ಮೊರೆ ಹೋಗಿದೆ. ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇ ತಡ, ಅಳೆದು-ತೂಗಿ ಕಾಂಗ್ರೆಸ್ ಕೂಡ ಸಂಭಾವ್ಯ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ್ ಅವರ ಹೆಸರನ್ನು ಮುನ್ನೆಲೆಗೆ ಬಿಟ್ಟಿದೆ. ಇವರ ಹೆಸರೇ ಫೈನಲ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
6ರಲ್ಲಿ ಕಾಂಗ್ರೆಸ್‌ , 1ರಲ್ಲಿ ಬಿಜೆಪಿ, ಮತ್ತೊಂದರಲ್ಲಿ ಕೆಆರ್‌ಪಿಪಿ ಅಭ್ಯಥಿ ಗೆಲುವು
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಒಟ್ಟುಗೂಡಿಸಿ ಲೋಕಸಭಾ ಕ್ಷೇತ್ರ ರಚಿಸಲಾಗಿದೆ. ಮಸ್ಕಿ, ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿದ್ದರೆ, ಕನಕಗಿರಿ ವಿಧಾನಸಭಾ ಕ್ಷೇತ್ರ ಎಸ್ಸಿಗೆ ಮೀಸಲಾಗಿದೆ. ಉಳಿದ 6 ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್, ಯಲಬುರ್ಗಾದಲ್ಲಿ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ಗಂಗಾವತಿಯಲ್ಲಿ ಕೆಆರ್‌ಪಿಪಿಯ ಜನಾರ್ದನ ರೆಡ್ಡಿ, ಕನಕಗಿರಿಯಲ್ಲಿ ಕಾಂಗ್ರೆಸ್‌ನ ಶಿವರಾಜ ತಂಗಡಗಿ, ಕುಷ್ಟಗಿಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್, ಸಿಂಧನೂರಿನಲ್ಲಿ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ, ಮಸ್ಕಿಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರ್ವಿಹಾಳ, ಸಿರುಗುಪ್ಪದಲ್ಲಿ ಕಾಂಗ್ರೆಸ್‌ನ ಬಿ.ಎಂ.ನಾಗರಾಜ ಗೆಲುವು ಸಾಧಿಸಿದ್ದಾರೆ. ಒಂದು ರೀತಿ ಕೊಪ್ಪಳ ಲೋಕಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಬಲಾ ಬಲ ಲೆಕ್ಕಹಾಕಿದರೆ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಹೆಚ್ಚು ಗೆಲುವು ಪಡೆದಿದ್ದಾರೆ. ಒಟ್ಟು 8 ಕ್ಷೇತ್ರಗಳಲ್ಲಿ 6ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದರೆ, ಗಂಗಾವತಿ ಹಾಗೂ ಕುಷ್ಟಗಿ ಕ್ಷೇತ್ರಗಳಲ್ಲಿ ಕ್ರಮವಾಗಿ ಕೆಆರ್‌ಪಿಪಿ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಪೂರಕ ವಾತಾವರಣವಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ.

ವೋಟ್ ಶೇರಿಂಗ್ ಯಾವ ಪಕ್ಷಕ್ಕೆ ಎಷ್ಟು ? :
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಿಗಿಂತ ಉತ್ತಮ ವೋಟ್ ಶೇರಿಂಗ್ ಪಡೆದುಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಅದು ಪರಿಣಾಮ ಬೀರಬಹುದೆನ್ನುವ ಲೆಕ್ಕಾಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು ಸೇರಿ 6,76,213 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಅಭ್ಯರ್ಥಿಗಳು 4,88,979 ವೋಟ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಟ್ಟು ಮತಗಳ ಅಂತರ 1,87,234 ಆಗಿದೆ. ಹಾಗಾಗಿ ಕಳೆದ ವಿಧಾನಸಭೆಯ ಚುನಾವಣೆಯಲ್ಲಿನ ಕಾಂಗ್ರೆಸ್‌ನ ಸಾಧನೆ ಗಮನಿಸಿದರೆ ಮತದಾರರ ಒಲವು ಆ ಪಕ್ಷದ ಕಡೆಗಿರುವುದು ಗೋಚರವಾಗುತ್ತದೆ ಎನ್ನುತ್ತಾರೆ ಮತದಾರರೊಬ್ಬರು. ಇನ್ನು ಲೋಕಸಭಾ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ, ಮತದಾರರ ಒಲವು-ನಿಲುವು ಕೆಲವೊಂದು ಬಾರಿ ಏಕ್‌ದಮ್ ಬದಲಾಗುತ್ತದೆ. ಅದಕ್ಕೆ ಹಲವು ಕಾರಣಗಳು ಉಂಟು, ಅಂತಹ ನಿದರ್ಶನಗಳನ್ನು ಸಾಕಷ್ಟು ಕೊಡಬಹುದು. ವಿಧಾನಸಭೆ ಚುನಾವಣೆಯಲ್ಲಿ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬೆಂಬಲಿಸಿದ್ದೇನು ಸತ್ಯ, ಆದರೆ, ಅದೇ ನಿಲುವು ಸ್ಥಿರವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ ಎಂಬುದು ಮತ್ತೊಬ್ಬ ಮತದಾರರ ಅಭಿಮತವಾಗಿದೆ.


Spread the love

Leave a Reply

Your email address will not be published. Required fields are marked *