ನಮ್ಮ ಸಿಂಧನೂರು, ಮಾರ್ಚ್ 21
ಏಪ್ರೀಲ್ 1ರಿಂದ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುವುದು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ. ಮಾರುಕಟ್ಟೆ ಮಾರ್ಗಸೂಚಿ ದರಗಳು ಒಂದು ವೇಳೆ ಪರಿಷ್ಕರಣೆ ಆಗದೇ ಹೋದಲ್ಲಿ ಶೇಕಡಾ 0.3ಕ್ಕಿಂತ ಕಡಿಮೆ ಇಲ್ಲದಂತೆ, ಶೇಕಡಾ 0.5ಕ್ಕಿಂತ ಹೆಚ್ಚಿಗೆ ಇಲ್ಲದಂತೆ ದರ ನಿಗದಿಪಡಿಸಬೇಕಾಗಿರುತ್ತದೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆಗಳ ಅನ್ವಯ ಮತ್ತು ಉಲ್ಲೇಖಿತ ಸುತ್ತೋಲೆಗಳ ಅನ್ವಯ ತೆರಿಗೆಯನ್ನು ಪ್ರತಿ ಆರ್ಥಿಕ ವರ್ಷದಲ್ಲಿ ಹೆಚ್ಚಿಸಬೇಕಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಹಾಗಾಗಿ ಆರ್ಥಿಕ ವರ್ಷ 2024-25ನೇ ಸಾಲಿನ ಏಪ್ರೀಲ್ 1ರಿಂದ ಆಸ್ತಿ ಮಾಲೀಕರು ಹಾಗೂ ಸಾರ್ವಜನಿಕರು ಪರಿಷ್ಕರಿಸಿದ ತೆರಿಗೆ ದರಗಳಂತೆ ಕಡ್ಡಾಯವಾಗಿ ಸಕಾಲದಲ್ಲಿ ಪಾವತಿಸುವಂತೆ ಅವರು ಮನವಿ ಮಾಡಿದ್ದಾರೆ.