(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 27
ಟಿಕೆಟ್ ಕಟ್ ಮಾಡಿದ್ದರಿಂದ ಮುನಿಸಿಕೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ಹಾಗೂ ಅವರ ಬೆಂಬಲಿಗರನ್ನು ಬಿಜೆಪಿ ಹೈಕಮಾಂಡ್ ಮನವೊಲಿಸಿತೆ ? ಇಲ್ಲವೇ ಸಂಗಣ್ಣ ಕರಡಿ ಅವರು ಹೈಕಮಾಂಡ್‌ನ ತೀರ್ಮಾನವನ್ನು ಧಿಕ್ಕರಿಸಿದರೆ ಎನ್ನುವ ಕುರಿತು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತರಹೇವಾರಿ ಚರ್ಚೆಗಳು ಹರಿದಾಡುತ್ತಿವೆ. ಸತತ ಎರಡು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಸಂದರ್ಭದಲ್ಲಿಯೇ ಹೈಕಮಾಂಡ್ ಟಿಕೆಟ್ ನಿರಾಕರಿಸುವ ಮೂಲಕ ಹೊಸಬರಿಗೆ ಮಣೆಹಾಕಿರುವುದು ಎಷ್ಟು ಸರಿ. ಪಕ್ಷದ ನಿಷ್ಠಾವಂತ ರಾಜಕಾರಣಿ ಮತ್ತು ಅಭಿವೃದ್ಧಿಪರ ಚಿಂತನೆಯುಳ್ಳ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡದೇ, ಬಿಜೆಪಿಯ ಕೆಲ ಬಣಗಳ ಮಾತಿಗೆ ಮರುಳಾಗಿ ಹೈಕಮಾಂಡ್ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಅವರ ಬೆಂಬಲಿಗರು ಅಸಮಾಧಾನ ತೋಡಿಕೊಂಡಿದ್ದಾರೆ.
25ರ ಸಭೆಯಲ್ಲಿ ಏನಾಯ್ತು ?
ಮಾರ್ಚ್ 21ರಂದು ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೊಪ್ಪಳದಲ್ಲಿ ಕರೆದಿದ್ದ 8 ವಿಧಾನಸಭಾ ಕ್ಷೇತ್ರದ ಬೆಂಬಲಿಗರ ಸಭೆಯಲ್ಲಿ, ಹಾಲಿ ಸಂಸದರು ತಮ್ಮ ಗಮನಕ್ಕೆ ತರದಂತೆ ಏಕಾಏಕಿ ಟಿಕೆಟ್ ಕಟ್ ಮಾಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಹೈಕಮಾಂಡ್‌ಗೆ 4 ದಿನಗಳ ಗಡುವು ಕೊಟ್ಟಿದ್ದರು. ಸಭೆಯ ನಂತರ ಎಚ್ಚೆತ್ತ ಪಕ್ಷದ ಹೈಕಮಾಂಡ್‌ನ ಹಲವರು ಸಂಗಣ್ಣ ಕರಡಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸಾಂತ್ವನಾ ಹೇಳಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ಹೇಳಲಾಗಿತ್ತು. ತದನಂತರ ಮಾರ್ಚ್ 24ರಂದು ಬೆಂಗಳೂರಿಗೆ ಬರುವಂತೆ ಹಾಲಿ ಸಂಸದರಿಗೆ ಬುಲಾವ್ ಬಂದಿತ್ತೆಂದು ತಿಳಿದುಬಂದಿತ್ತು, ಕೊನೆಗೆ ಅಂದು ಸಭೆ ಆಯೋಜನೆಗೊಳ್ಳದಿರುವುದರಿಂದ 25ರಂದು ಸಭೆ ನಡೆದಿದೆ ಎಂದು ಗೊತ್ತಾಗಿದೆ.
ಎಂಎಲ್ಸಿ, ರಾಜ್ಯಸಭೆ ಸದಸ್ಯ ಸ್ಥಾನದ ಆಫರ್ ?
ಮಾರ್ಚ್ 25ರಂದು ನಡೆದ ಸಭೆಯಲ್ಲಿ ಈಗಾಗಲೇ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಆಗಿದ್ದರಿಂದ ವಿಧಾನ ಪರಿಷತ್ ಇಲ್ಲವೇ ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ಪರಿಗಣಿಸುವುದಾಗಿಯೂ ಪಕ್ಷ ಹೊರತುಪಡಿಸಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳದೇ ಪಕ್ಷ ಸಂಘಟಿಸಲು ಹಾಗೂ ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿಯೂ ಹೈಕಮಾಂಡ್ ಭರವಸೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‌ನ ಮನವೊಲಿಕೆಗೆ ಸಂಗಣ್ಣ ಕರಡಿ ಅವರು ಪಟ್ಟು ಸಡಿಲಿಸಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಹಾಲಿ ಸಂಸದರ ನಡೆ ಯಾವ ಕಡೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರದ ಬಗ್ಗೆ ತಿಳಿದುಬಂದಿಲ್ಲ.